‘ಸಂಸ್ಕೃತಿ-ಪರಂಪರೆಯ ವಿನಾಶ, ವಿವಾಹ ವಿಳಂಬ ಹಾಗೂ ಅವೈಜ್ಞಾನಿಕ ನದಿ ತಿರುವು ಯೋಜನೆಗಳ ಅನುಷ್ಠಾನದಿಂದ ಈ ದೇಶಕ್ಕೆ ಅಪಾಯ ಕಾದಿದೆ’ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಳವಳವ್ಯಕ್ತಪಡಿಸಿದ್ದಾರೆ. ಯಲ್ಲಾಪುರದ ಆನಗೋಡು ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಮಾಡಿದ ಅವರು ‘ಹಿಂದೂ ಸಮುದಾಯದವರು ಅಲ್ಪಸಂಖ್ಯಾತರಾಗುತ್ತಿದ್ದು, ಅದರಿಂದ ಸಾಕಷ್ಟು ಅಪಾಯಗಳು ಎದುರಾಗುವ ಸಾಧ್ಯತೆಯಿದೆ’ ಎಂದಿದ್ದಾರೆ.
‘ನಮ್ಮಲ್ಲಿವಿವಾಹ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಸೂಕ್ತ ವಯಸ್ಸಿನ ವಿವಾಹ ಆಗದೇ ಇದ್ದರೆ ಸಮುದಾಯ ಬೆಳವಣಿಗೆಗೆ ಸಮಸ್ಯೆ ಆಗುತ್ತದೆ. ಸರ್ಕಾರ ಸಹ ಸಮುದಾಯದೊಳಗಿನ ವಿವಾಹಕ್ಕೆ ವಿರುದ್ಧ ಪ್ರೋತ್ಸಾಹ ನೀಡುತ್ತಿರುವುದು ಕಳವಳಕಾರಿ. ಅಂಥ ಸನ್ನಿವೇಶದಲ್ಲಿ ಆನಗೋಡು ಸೇವಾ ಸಹಕಾರಿ ಸಂಘದಂಥ ಸಂಸ್ಥೆಗಳು ಹಳ್ಳಿ ಹುಡುಗರನ್ನು ಮದುವೆ ಆದವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿವೆ. ಇಂಥ ಕಾರ್ಯ ಶ್ಲಾಘನೀಯ’ ಎಂದರು. ‘ದಿನದಿಂದ ದಿನಕ್ಕೆ ಧರ್ಮ-ಸಂಸ್ಕೃತಿ ಬೆಳವಣಿಗೆ ಹಿಮ್ಮುಖವಾಗುತ್ತಿದೆ. ಅದು ಆತಂಕಕಾರಿ ಬೆಳವಣಿಗೆ’ ಎಂದರು.
‘ಈ ಭೂಮಿ ನಮಗೆ ಎಲ್ಲವನ್ನು ಕೊಟ್ಟಿದೆ. ಆಹಾರ, ಬಟ್ಟೆ,ಮನೆಯಂಥ ಮೂಲಭೂತ ಸೌಕರ್ಯವನ್ನು ಕಲ್ಪಿಸಿದೆ. ನಾವು ಭೂಮಿಯನ್ನು ದೇವತೆಯಂತೆ ಪೂಜಿಸಬೇಕು. ಪ್ರತಿ ದಿನ ಭೂತಾಯಿಗೆ ನಮಸ್ಕರಿಸಿಯೇ ಹೆಜ್ಜೆಯಿಡಬೇಕು’ ಎಂದು ಕರೆ ನೀಡಿದರು. ‘ಪ್ಲಾಸ್ಟಿಕ್ ಎಂಬುದು ಭೂಮಿಗೆ ಜೀರ್ಣಿಸಲಾಗದ ವಸ್ತುವಾಗಿದ್ದು, ಅದರ ಬಳಕೆ ಕಡಿಮೆ ಮಾಡಬೇಕು’ ಎಂದು ಮನವಿ ಮಾಡಿದರು. ‘ರಾಸಾಯಿನಕ ತ್ಯಾಜ್ಯದಿಂದ ಭೂ ಮಾಲಿನ್ಯ ಹೆಚ್ಚಾಗಿದೆ. ಅಂಥ ತ್ಯಾಜ್ಯದಿಂದಲೂ ಕೃಷಿಕರು ದೂರವಿರಬೇಕು. ಸಹಕಾರಿ ಸಂಸ್ಥೆ ಸಹ ಭೂಮಿಯ ಹಾಗೇ. ಧರ್ಮ ಸಂಸ್ಕೃತಿಗೆ ಸಹಕಾರಿ ಸಂಸ್ಥೆಯ ಕೊಡುಗೆ ಅಪಾರ’ ಎಂದರು.
ಅವೈಜ್ಞಾನಿಕ ನದಿ ತಿರುವು ಯೋಜನೆ ಕುರಿತು ಮಾತನಾಡಿದ ಶ್ರೀಗಳು ‘ನವೆಂಬರ್ 3ರಂದು ಯಲ್ಲಾಪುರದಲ್ಲಿ ನಡೆಯುವ ಪ್ರತಿಭಟನೆಗೆ ಎಲ್ಲರೂ ಕೈ ಜೋಡಿಸಬೇಕು. ಜನ ಬಲವೇ ಹೋರಾಟಕ್ಕೆ ಶಕ್ತಿ’ ಎಂದರು. ‘ಗಂಗಾಷ್ಟಮಿ ದಿನದಿಂದ ನರಕ ಚತುರ್ದಶಿಯವರೆಗೆ ಎಲ್ಲರೂ ನದಿ ಪೂಜೆ ಮಾಡಬೇಕು. ಬೇಡ್ತಿ-ಗಂಗಾವಳಿ-ಅಘನಾಶಿನಿ ಉಳಿವಿಗೆ ಪ್ರಾರ್ಥಿಸಿ ಉಪನದಿಗಳಿಗೂ ಪೂಜೆ ಸಲ್ಲಿಸಬೇಕು’ ಎಂದು ಕರೆ ನೀಡಿದರು. ‘ನದಿ ತಿರುವು ಯೋಜನೆಯ ಸಮಸ್ಯೆ ಗಂಭೀರವಾಗಿದ್ದು, ಪತ್ರ ಚಳುವಳಿಯ ಪ್ರಮಾಣ ಹೆಚ್ಚಿಸಬೇಕು’ ಎಂದು ಸೂಚಿಸಿದರು.