ಶಿರಸಿ ಕೊಡ್ಲಗದ್ದೆ ಸಮೀಪದ ಜಡ್ಡಿಗದ್ದೆಯ ಮಹಮದ್ ಆಸೀದ್ ಅವರು ಕುಮಟಾ ಬಸ್ ನಿಲ್ದಾಣದಲ್ಲಿದ್ದ ಸ್ಕೂಟರ್ ಕದ್ದಿದ್ದಾರೆ. ಹೀಗಾಗಿ ಕುಮಟಾ ಪೊಲೀಸರು ಮಹಮದ್ ಆಸೀದ್ ಅವರನ್ನು ಹಿಡಿದು ಜೈಲಿಗೆ ಕಳುಹಿಸಿದ್ದಾರೆ.
ಕೆಎಸ್ಆರ್ಟಿಸಿ ನಿರ್ವಾಹಕ ಶಿವಮೂರ್ತಿ ಎನ್ ಎಸ್ ಅವರು ಕುಮಟಾ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಕಳೆದುಕೊಂಡಿದ್ದರು. ಅಕ್ಟೊಬರ್ 20ರಂದು ರಾತ್ರಿ 9.15ರ ಸುಮಾರಿಗೆ ಕುಮಟಾ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಸ್ಕೂಟರ್ ಕಾಣೆಯಾಗಿತ್ತು. ಎಲ್ಲಾ ಕಡೆ ಅದರ ಹುಡುಕಾಟ ನಡೆಸಿದ ಶಿವಮೂರ್ತಿ ಅವರು ಸ್ಕೂಟರ್ ಸಿಗದ ಕಾರಣ ಪೊಲೀಸರ ಮೊರೆ ಹೋಗಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿಶೇಷ ತಂಡ ರಚಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ತಾಂತ್ರಿಕ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿ ಮಹಮದ್ ಆಸೀದ್ ಅವರನ್ನು ಹುಡುಕಿದರು. ಅಂದಾಜು 20 ಸಾವಿರ ರೂ. ಮೌಲ್ಯದ ಸ್ಕೂಟರನ್ನು ಜಪ್ತು ಮಾಡಿದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಎಸ್ ವಿ ಅವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ, ಪಿಎಸ್ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಮತ್ತು ಸುಬ್ರಹ್ಮಣ್ಯ ಹೆಗಡೆ ಸೇರಿ ಈ ಕಾರ್ಯಾಚರಣೆ ನಡೆಸಿದ್ದಾರೆ.