ಹೆಜನಿಯ ಬರೆಗುಡ್ಡೆಯಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಶಿವಮೊಗ್ಗದ ಭದ್ರಾವತಿಯ ಕಳ್ಳರಿಂದ 6.24 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೈಕನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಹೆಜನಿ ಗ್ರಾಮದ ಬರೆಗುಡ್ಡೆಯ ನೀಲಕಂಠ ಕನ್ನ ನಾಯ್ಕಅವರ ಮನೆಯಲ್ಲಿ ಅಕ್ಟೊಬರ್ 28ರಂದು ಮಧ್ಯಾಹ್ನ ಕಳ್ಳತನ ನಡೆದಿತ್ತು. ಹಳದಿ ಬಣ್ಣದ ಬೈಕ್ನಲ್ಲಿ ಬಂದಿದ್ದ ಮೂವರು ಕಳ್ಳರು ಮನೆಯ ಹಿಂಭಾಗದ ಗೋಡೆ ಹತ್ತಿ ಒಳಗೆ ನುಗ್ಗಿದ್ದರು. ಹಾಲ್ನಲ್ಲಿದ್ದ ಗೋದ್ರೇಜ್ ಕಪಾಟನ್ನು ಮೀಟಿ ತೆರೆದಿದ್ದರು. ಬಳಿಕ ಅದರೊಳಗಿದ್ದ ಸೇಫ್ ಲಾಕರ್ನ ಚಾವಿ ಬಳಸಿ ಲಾಕರ್ ತೆರೆದು 35 ಗ್ರಾಂ ತೂಕದ ಬಂಗಾರದ ತಾಳಿ ಸರ, 16 ಗ್ರಾಂ ತೂಕದ ಬಂಗಾರದ ಸರ, 5 ಗ್ರಾಂ ತೂಕದ ಬಂಗಾರದ ಕಿವಿಯೋಲೆಗಳ ಲಾಕೆಟ್ ಹಾಗೂ 4 ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದರು.
ಈ ಕುರಿತು ನೀಲಕಂಠ ನಾಯ್ಕ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಅವರು ತಂಡ ರಚಿಸಿದ್ದರು. ಪಿಐ ಜೆ ಬಿ ಸೀತಾರಾಮ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರದ ಸಿದ್ದಲಿಂಗ ಎನ್. (29), ಕಿರಣ (26) ಹಾಗೂ ವಿಜಯ ಎನ್. (30) ಅವರನ್ನು ಬಂಧಿಸಿದ್ದಾರೆ. ಈ ಮೂವರು ಕೊಡಗು, ಶಿವಮೊಗ್ಗ, ಉಡುಪಿ, ದಾವಣಗೆರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದಿರುವ ವಿವಿಧ ಕಳ್ಳತನ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾರೆ.