ಸದಾಶಿವಗಡದಲ್ಲಿರುವ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಆರು ಸಾವಿರ ಗ್ರಾಹಕರಿಗೆ ಅನ್ಯಾಯವಾಗಿದೆ. `ವಂಚನೆಗೆ ಒಳಗಾದ ಎಲ್ಲರಿಗೂ ನ್ಯಾಯ ದೊರಕಿಸಿ ಅವರ ಹಣ ಮರಳಿಸಬೇಕು’ ಎಂದು ಜನಶಕ್ತಿ ವೇದಿಕೆ ಆಗ್ರಹಿಸಿದೆ.
ಅನ್ಯಾಯಕ್ಕೆ ಒಳಗಾದ ಸೊಸೈಟಿ ಗ್ರಾಹಕರ ಜೊತೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ದಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. ಜಿಲ್ಲಾಡಳಿತದ ಮೂಲಕ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಮನವಿ ಸ್ವೀಕರಿಸಿ, ಅದನ್ನು ಮುಖ್ಯಮಂತ್ರಿಗೆ ರವಾನಿಸುವ ಭರವಸೆ ನೀಡಿದ್ದಾರೆ. `ಸಹಕಾರಿ ಸಂಘದಲ್ಲಿ ಸುಮಾರು 57 ಕೋಟಿ ರೂ ಹಣದ ವಂಚನೆ ನಡೆದಿದೆ ಎಂಬ ಆರೋಪವಿದೆ. ಸದಾಶಿವಗಡದ ಲಿಂಗರಾಜ್ ಕಲ್ಗುಡ್ಕರ್ ಹಾಗೂ ಅವರ ಕುಟುಂಬದ ಆರು ಭಾಗಿಯಾದ ಬಗ್ಗೆ ದೂರು ದಾಖಲಾಗಿದೆ. ಆದರೆ, ಪ್ರಕರಣ ದಾಖಲಾಗಿ ಎರಡು ವರ್ಷ ಕಳೆದರೂ ಗ್ರಾಹಕರಿಗೆ ನ್ಯಾಯ ಸಿಕ್ಕಿಲ್ಲ’ ಎಂದವರು ವಿವರಿಸಿದ್ದಾರೆ.
`ಈ ಬಗ್ಗೆ ಸಹಕಾರ ಇಲಾಖೆಯ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಉನ್ನತ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ಭರವಸೆ ದೊರೆತಿದ್ದರೂ ಫಲಿತಾಂಶ ಏನೂ ಆಗಿಲ್ಲ’ ಎಂದು ಗ್ರಾಹಕರು ಅಸಮಧಾನವ್ಯಕ್ತಪಡಿಸಿದ್ದಾರೆ. `ಸಹಕಾರಿ ಸಂಘಗಳಲ್ಲಿ ಜನರು ತಮ್ಮ ಕಷ್ಟದ ದುಡಿಮೆಯ ಹಣವನ್ನು ಭದ್ರತೆ ಮತ್ತು ಭರವಸೆಯಿಂದ ಠೇವಣಿ ಇಡುತ್ತಾರೆ. ಆದರೆ, ಇಂತಹ ಪ್ರಕರಣಗಳಲ್ಲಿ ಗ್ರಾಹಕರ ಹಣ ಸಿಲುಕಿಕೊಂಡರೆ ಕುಟುಂಬಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತದೆ’ ಎಂದವರು ವಿವರಿಸಿದ್ದಾರೆ. ವಂಚಿತ ಗ್ರಾಹಕರ ನ್ಯಾಯದ ಹೋರಾಟಕ್ಕೆ ಜನಶಕ್ತಿ ವೇದಿಕೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಮಾಧವ ಬಿ ನಾಯಕ ಅವರು ಬೆಂಬಲ ಸೂಚಿಸಿದ್ದು, `ಸಾವಿರಾರು ಜ£ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಿದ್ದರೂ ಸಮಸ್ಯೆಗೆ ಪರಿಹಾರ ದೊರಕದಿರುವುದು ಕಳವಳಕಾರಿ ಸಂಗತಿ’ ಎಂದಿದ್ದಾರೆ.
ಈ ಹೋರಾಟದ ಪ್ರಮುಖರಾದ ಹೂವಪ್ಪ ದೊಡ್ಡಣ್ಣವರ್, ಗಜೇಂದ್ರ ಕೆ. ನಾಯ್ಕ್, ಸಾಯಿನಾಥ್ ಮಿತ್ರಿ, ರಾಜಕುಮಾರ್ ಎಂ. ನಾಯ್ಕ್, ಅಮೀನಾ ನದಾಫ್, ಬಾಲಕೃಷ್ಣ ನಾಯ್ಕ್, ರೋಹಿದಾಸ್ ತಾಮಸೆ ಕೃಷ್ಣಾನಂದ ನಾಯ್ಕ್ ಸುಭಾಷ್ ನಾಯ್ಕ್, ಗೀತಾ ಸಿ ಜೋಶಿ, ಆನಂದ್ ನಾಯ್ಕ್, ಉಷಾ ವಿ ರಾಯ್ಕರ, ಖಲೀಲ್ ಖಾದಿ ಅವರು ಮನವಿ ಸಲ್ಲಿಕೆಗೆ ಸಾಕ್ಷಿಯಾಗಿದ್ದಾರೆ. ನವೆಂಬರ್ 12ರೊಳಗೆ ಈ ಪ್ರಕರಣದಲ್ಲಿ ಪರಿಣಾಮಕಾರಿ ಕ್ರಮ ಕೈಗೊಂಡು ವಂಚಿತ ಗ್ರಾಹಕರಿಗೆ ನ್ಯಾಯ ದೊರಕಿಸಲು ಮುಂದಾಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಅರಬೆತ್ತಲೆ ಧರಣಿ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.