ಅಪಘಾತದಲ್ಲಿ ಸಾವನಪ್ಪಿದವರ ಹೆಸರಿನಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜು ಗಾಯಗೊಂಡವರಿಗೆ ಚಿಕಿತ್ಸೆ ನೀಡಿದೆ. ಸಾವನಪ್ಪಿದವರ ಹೆಸರು ತೆಗೆಯಿಸಿ ಗಾಯಗೊಂಡವರ ಹೆಸರು ನಮೂದಿಸಲು ಮಾಡಿದ ಸಾಹಸಕ್ಕೆ ಗಾಯಾಳು ಮೂರು ತಾಸು ನರಳಾಟ ನಡೆಸಿದ್ದಾರೆ.
ಸದಾಶಿವಗಡದ ಕಾಳಿ ಸೇತುವೆ ಬಳಿ ಸೋಮವಾರ ನಡೆದ ಅಪಘಾತದಲ್ಲಿ ಅಶೋಕ ಎಂಬಾತರು ಸಾವನಪ್ಪಿದ್ದರು. ಲಕ್ಷಣ ಎಂಬಾತರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಆದರೆ, ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿನವರು ಗಾಯಗೊಂಡ ಲಕ್ಷಣ ಅವರಿಗೆ ಚಿಕಿತ್ಸೆ ನೀಡುವಾಗ ದಾಖಲಾತಿಗಳಲ್ಲಿ ಸಾವನಪ್ಪಿದ ಅಶೋಕ ಅವರ ಹೆಸರು ಬರೆದುಕೊಂಡರು. ಉನ್ನತ ಮಟ್ಟದ ಚಿಕಿತ್ಸೆಗೆ ಆ ಚೀಟಿ ಸಮಸ್ಯೆ ತಂದಿದ್ದು, ತುರ್ತು ಸನ್ನಿವೇಶದಲ್ಲಿಯೂ ಲಕ್ಷಣ ಅವರ ಚಿಕಿತ್ಸೆಗೆ ಮೂರು ತಾಸು ತಡವಾಯಿತು.
ಲಕ್ಷಣ ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರ£ ನ್ಯೂರಾಜಿಲಿಸ್ಟ್ ಬಳಿ ಕಳುಹಿಸಬೇಕಿತ್ತು. ಕಿಮ್ಸ್’ನಲ್ಲಿ ನ್ಯೂರಾಜಿಲಿಸ್ಟ್ ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ಕಳುಹಿಸುವ ನಿರ್ಧಾರವಾಯಿತು. ಆದರೆ, ನಿಜವಾಗಿಯೂ ಲಕ್ಷಣ ಅವರು ಗಾಯಗೊಂಡು ಚಿಕಿತ್ಸೆಪಡೆಯುತ್ತಿದ್ದರೂ ವೈದ್ಯಕೀಯ ದಾಖಲೆಗಳ ಪ್ರಕಾರ ಅವರ ಹೆಸರು ಅಶೋಕ ಎಂದು ಬದಲಾಗಿತ್ತು. ಸಾವನಪ್ಪಿದ ಅಶೋಕ ಅವರ ಹೆಸರನ್ನು ಲಕ್ಷಣ ಅವರಿಗಿರಿಸಿ ಇಲ್ಲಿನ ವೈದ್ಯರು ಚಿಕಿತ್ಸೆ ನೀಡಿದ್ದು, ಆ ಹೆಸರು ಬದಲಿಸಿ ಬೇರೆ ಆಸ್ಪತ್ರೆಗೆ ಕಳುಹಿಸಲು ಮೂರು ತಾಸು ಬೇಕಾಯಿತು.
`ಸಾವನಪ್ಪಿದವರ ಹೆಸರು ಅಶೋಕ. ಗಾಯಗೊಂಡವರ ಹೆಸರು ಲಕ್ಷಣ. ಹೀಗಾಗಿ ಗಾಯಗೊಂಡವರ ವೈದ್ಯಕೀಯ ಚೀಟಿಯಲ್ಲಿ ಲಕ್ಷಣ ಎಂದು ಹೆಸರು ಬದಲಿಸಿಕೊಡಿ’ ಎಂದು ಲಕ್ಷಣ ಅವರ ಕುಟುಂಬದವರು ಗೋಗರೆಯುತ್ತಿದ್ದರು. ಆದರೆ, ಕಿಮ್ಸ್ ಸಿಬ್ಬಂದಿ ಮಾತ್ರ `ಪೊಲೀಸರಿಂದ ಪ್ರಮಾಣ ಪತ್ರ ತಂದರೆ ಮಾತ್ರ ಹೆಸರು ಬದಲಿಸುತ್ತೇವೆ’ ಎಂದು ಪಟ್ಟುಹಿಡಿದಿದ್ದರು. ಕೊನೆಗೆ ಈ ವಿಷಯ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ಗಮನಕ್ಕೆ ಬಂದಿತು. ಅವರು ಆಸ್ಪತ್ರೆಗೆ ಧಾವಿಸಿದರು. ಚಿತ್ತಾಕುಲ ಪೊಲೀಸ್ ಠಾಣೆಯವರನ್ನು ಅಲ್ಲಿಗೆ ಕರೆಯಿಸಿ ಪರಿಸ್ಥಿತಿ ಬಗ್ಗೆ ವಿವರಿಸಿದರು.
`ವೈದ್ಯಕೀಯ ಸಿಬ್ಬಂದಿ ಮಾಡಿದ ಎಡವಟ್ಟು ಸರಿಪಡಿಸಲು ಪೊಲೀಸ್ ಪ್ರಮಾಣ ಪತ್ರ ಅಗತ್ಯವಿಲ್ಲ’ ಎಂದು ಪೊಲೀಸರು ಹೇಳಿದರು. ಸ್ಥಾನಿಕ ವೈದ್ಯಾಧಿಕಾರಿ ಡಾ ವಿಜಯರಾಜ್ ಅವರು ಆಗಮಿಸಿ ಹೆಸರು ಬದಲಾವಣೆ ಮಾಡಿಕೊಟ್ಟರು.