ಶಾಸಕ ದಿನಕರ ಶೆಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಹೆಸರುಬರೆದು ಪರಾರಿಯಾಗಿದ್ದ ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರು ಮರಳಿ ಬಂದಿದ್ದು, ಇದೀಗ ಅವರು ತಮ್ಮ ತಾಯಿ ಜೊತೆ ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ. `ನನ್ನನ್ನು ಕ್ಷಮಿಸಿಬಿಡಿ’ ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ. `ವೆಂಕಟೇಶ್ ಅವರ ಮುಖವನ್ನು ನೋಡಿಲ್ಲ. ಫೋನ್ ಸಹ ಮಾಡಿಲ್ಲ’ ಎಂದು ದಿನಕರ ಶೆಟ್ಟಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೆ ವೆಂಕಟೇಶ್ ಆರ್ ಅವರು ತಮ್ಮ ತಾಯಿ ಜೊತೆ ಶಾಸಕರನ್ನು ಭೇಟಿ ಮಾಡಿ ಮುಖ ಕಾಣಿಸಿದ್ದಾರೆ.
ಭಟ್ಕಳದ ವೆಂಕಟೇಶ್ ಆರ್ ಅವರು ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿದ್ದರು. ಅನುಕಂಪದ ಆಧಾರದಲ್ಲಿ ಅವರು ತಂದೆಯ ನೌಕರಿಪಡೆದಿದ್ದು, ಕಟ್ಟುನಿಟ್ಟಾಗಿ ಕೆಲಸ ಮಾಡಿಕೊಂಡಿದ್ದರು. ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸುವ ಒತ್ತಡಕ್ಕೆ ಮಣಿಯದ ಅವರು ತಮ್ಮ ಮೇಲೆ ಒತ್ತಡ ತಂದ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ವಿರುದ್ಧ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಶಾಸಕ ದಿನಕರ ಶೆಟ್ಟಿ ಅವರ ಹೆಸರನ್ನು ಸಹ ಉಲ್ಲೇಖಿಸಿದ್ದರು. ಅದಾದ ನಂತರ ವೆಂಕಟೇಶ್ ಆರ್ ಅವರು ಕಾಣೆಯಾಗಿದ್ದು, ಅನೇಕ ಗೊಂದಲಗಳಿಗೆ ಕಾರಣವಾಗಿತ್ತು.
ವೆಂಕಟೇಶ ಆರ್ ಅವರ ತಾಯಿ ಆಶಾ ಹರಿಜನ ಅವರು ಮಗನ ಕಣ್ಮರೆ ಬಗ್ಗೆ ಹಾಗೂ ಮೇಲಧಿಕಾರಿಗಳು ನೀಡಿದ ಹಿಂಸೆ ಬಗ್ಗೆ ಎರಡು ಪೊಲೀಸ್ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ವೆಂಕಟೇಶ್ ಆರ್ ಅವರು ತಾಯಿಗೆ ಫೋನ್ ಮಾಡಿ ಸಮಾಧಾನ ಮಾಡಿದ್ದರು. ಫೋನ್ ಜಾಡು ಹಿಡಿದ ಪೊಲೀಸರು ವೆಂಕಟೇಶ್ ಅವರನ್ನು ಬೆಳಗಾವಿಯಲ್ಲಿ ಹುಡುಕಿ ಅವರನ್ನು ಕೇಂದ್ರಸ್ಥಾನಕ್ಕೆ ಕರೆತಂದಿದ್ದರು. ಈ ವಿಷಯ ಎಲ್ಲಡೆ ಚರ್ಚೆ ನಡೆದಿದ್ದು, ರಾಜಕೀಯ ಪಕ್ಷಗಳ ಟೀಕೆಗಳಿಗೂ ಕಾರಣವಾಗಿತ್ತು.
ಕುಮಟಾ ಪುರಸಭೆಯಲ್ಲಿನ ಅಕ್ರಮ-ಅವ್ಯವಹಾರಗಳ ವಿಷಯದ ಬಗ್ಗೆ ಬರೆದ ಪತ್ರದಲ್ಲಿ ಕುಮಟಾ ರಾಷ್ಟಿಯ ಹೆದ್ದಾರಿ ಅಂಚಿನಲ್ಲಿರುವ ವಿನಾಯಕ ಹೊಟೇಲ್ ಅನಧಿಕೃತವಾಗಿದ್ದರೂ ಆ ಕಟ್ಟಡಕ್ಕೆ ಅಧಿಕೃತ ಮುದ್ರೆ ಒತ್ತುವಂತೆ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಒತ್ತಡ ಹೇರಿದ ಬಗ್ಗೆ ವಿವರಿಸಿದ್ದರು. ಅದರಲ್ಲಿ 4 ಲಕ್ಷ ರೂ ವ್ಯವಹಾರದ ಬಗ್ಗೆ ವೆಂಕಟೇಶ್ ಆರ್ ಅವರು ಬರೆದಿದ್ದು, ಪುರಸಭೆ ಮುಖ್ಯಾಧಿಕಾರಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರ ಒತ್ತಡವಿರುವ ಬಗ್ಗೆ ನಮೂದಿಸಿದ್ದರು. ಆದರೆ, ಇದನ್ನು ದಿನಕರ ಶೆಟ್ಟಿ ಅವರು ಅಲ್ಲಗಳೆದಿದ್ದರು. `ಈವರೆಗೂ ವೆಂಕಟೇಶ್ ಅವರ ಮುಖವನ್ನು ನೋಡಿಲ್ಲ. ಫೋನು ಮಾಡಿಲ್ಲ’ ಎಂದು ದಿನಕರ ಶೆಟ್ಟಿ ಹೇಳಿದ್ದರು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೆ ವೆಂಕಟೇಶ್ ಆರ್ ಅವರು ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ. ತಮಗಾದ ಸಮಸ್ಯೆಗಳ ಬಗ್ಗೆ ಅವರು ವಿವರಿಸಿದ್ದು, ಅನಗತ್ಯವಾಗಿ ಶಾಸಕರ ಹೆಸರು ಪ್ರಸ್ತಾಪಿಸಿದಕ್ಕೆ ಕ್ಷಮೆ ಕೋರಿದ್ದಾರೆ. `ವಿನಾಕಾರಣ ಆರೋಪ ಬಂದಿದ್ದರಿAದ ನನಗೂ ಬೇಸರವಾಗಿತ್ತು. ಸತ್ಕರ್ಮ ಹಾಗೂ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದು, ವೆಂಕಟೇಶ್ ಆರ್ ಅವರನ್ನು ಮನ್ನಿಸಿದ್ದಾರೆ.