ಚಿಪಗಿಯ ಅನೀಶ ಭಟ್ಟ ಅವರಿಗೆ ಮಹಿಳೆಯೊಬ್ಬರು ಸ್ಕೂಟಿ ಗುದ್ದಿದ್ದಾರೆ. ಅನೀಶ ಭಟ್ಟ ಅವರು ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡಿರುವುದನ್ನು ನೋಡಿದರೂ ಆ ಮಹಿಳೆ ಆರೈಕೆ ಮಾಡದೇ ಅಲ್ಲಿಂದ ಪರಾರಿಯಾಗಿದ್ದಾರೆ.
ಶಿರಸಿಯ ಚಿಪಗಿಯಲ್ಲಿ ಅನೀಶ ಗುರುರಾಜ ಭಟ್ಟ ಅವರು ವಾಸವಾಗಿದ್ದಾರೆ. 17 ವರ್ಷದ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾರೆ. ನವೆಂಬರ್ 7ರ ಸಂಜೆ ಅವರು ಸೈಕಲ್ ಮೇಲೆ ಶಿರಸಿಗೆ ಹೋಗಿದ್ದು, ಮನೆಗೆ ಮರಳುವ ಮುನ್ನ ಗಂಭೀರ ಪ್ರಮಾಣದಲ್ಲಿ ಗಾಯ ಮಾಡಿಕೊಂಡಿದ್ದಾರೆ. ಅನೀಶ ಭಟ್ಟ ಅವರು ಮಾರಿಕಾಂಬಾ ಮೈದಾನಕ್ಕೆ ಹೋಗಿ ಮರಳುವಾಗ ಅವರಿಗೆ ಅಪಘಾತವಾಗಿದೆ.
ಸೈಕಲ್ ಮೇಲೆ ಮನೆಗೆ ಮರಳುತ್ತಿದ್ದ ಅನೀಶ ಭಟ್ಟ ಅವರಿಗೆ ಚಿಪಗಿಯಿಂದ ಯಲ್ಲಾಪುರ ನಾಕಾ ಕಡೆ ಬರುತ್ತಿದ್ದ ಮಹಿಳೆಯೊಬ್ಬರು ತಮ್ಮ ಸ್ಕೂಟಿ ಗುದ್ದಿದ್ದಾರೆ. ಕಾಲೇಜು ರಸ್ತೆಯ ಎಚ್ ಪಿ ಗ್ಯಾಸ್ ಎದುರು ಈ ಅಪಘಾತ ನಡೆದಿದೆ. ಸ್ಕೂಟಿ ಸೈಕಲಿಗೆ ಗುದ್ದಿದ ರಭಸಕ್ಕೆ ಅನೀಶ ಭಟ್ಟ ಅವರು ಬಿದ್ದು ಎರಡು ಕೈಗೆ ನೋವು ಮಾಡಿಕೊಂಡಿದ್ದಾರೆ. ಅಪಘಾತ ಮಾಡಿದ ನಂತರ ಸ್ಕೂಟಿ ಸವಾರೆ ಅಲ್ಲಿಂದ ಪರಾರಿಯಾಗಿದ್ದಾರೆ. ಡಿಯೋ ಸ್ಕೂಟಿ ಗುದ್ದಿರುವುದನ್ನು ಅನೀಶ ಭಟ್ಟ ಅವರು ನೋಡಿದ್ದಾರೆ.
ಹಿಂದಿನಿAದ ಸ್ಕೂಟಿ ಗುದ್ದಿದಲ್ಲದೇ, ಗಾಯಾಳುವಿಗೆ ಆರೈಕೆ ಮಾಡದೇ ಪರಾರಿಯಾದ ಆ ಸವಾರೆ ವಿರುದ್ಧ ಪೊಲೀಸರು ಕೇಸು ಮಾಡಿದ್ದಾರೆ. ಅನೀಶ ಭಟ್ಟ ಅವರ ತಂದೆ ಗುರುರಾಜ ಗಣಪತಿ ಭಟ್ಟ ಅವರ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.