ಮುಂಡಗೋಡು ಪಟ್ಟಣದ ಎಲ್ಲಡೆ ಹಂದಿ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ಊರಿನಿಂದ ಇಲ್ಲಿ ಹಂದಿ ತಂದು ಬಿಡಲಾಗುತ್ತಿದ್ದು, ಅಂಥ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸುವ ಕೆಲಸ ಶುರುವಾಗಿದೆ.
ಮುಂಡಗೋಡಿನ ಗಲ್ಲಿ ಗಲ್ಲಿಗಳಲ್ಲಿಯೂ ಹಂದಿಗಳಿವೆ. ಸ್ವಚ್ಚತೆಗೆ ಈ ಹಂದಿಗಳು ಮಾರಕವಾಗಿರುವ ಬಗ್ಗೆ ಜನ ದೂರುತ್ತಿದ್ದಾರೆ. ಜೊತೆಗೆ ವಿವಿಧ ವಾಹನಗಳಿಗೆ ಅಡ್ಡಬಂದು ಅವು ಅಪಘಾತಕ್ಕೂ ಕಾರಣವಾಗುತ್ತಿವೆ. ಈ ಎಲ್ಲಾ ಹಿನ್ನಲೆ ಪಟ್ಟಣ ಪಂಚಾಯತದವರು `ಆಪರೇಶನ್ ಹಂದಿ ಕಾರ್ಯಾಚರಣೆ’ ಶುರು ಮಾಡಿದ್ದಾರೆ. ಆದರೆ, ಇದಕ್ಕೆ ಹಂದಿ ಸಾಕಣಿಗೆ ಮಾಡುವವರು ವಿರೋಧವ್ಯಕ್ತಪಡಿಸಿದರು.
ಅದಾಗಿಯೂ, ಪಟ್ಟಣ ಪಂಚಾಯತದವರು ಕೆಲ ಹಂದಿಗಳನ್ನು ಹಿಡಿದರು. ಅದನ್ನು ವಾಹನವೊಂದಕ್ಕೆ ತುಂಬಿಸಿ ಬೇರೆ ಕಡೆ ಕೊಂಡೊಯ್ದರು. `ಹಂದಿಗಳನ್ನು ಬೇರೆ ಕಡೆ ಸಾಗಿಸುವಂತೆ ಸೂಚನೆ ನೀಡಿದರೂ ಅದನ್ನು ಸಾಕುವವರು ಕೇಳಲಿಲ್ಲ. ಹೀಗಾಗಿ ಟೆಂಡರ್ ಕರೆದು ಅದರ ಸಾಗಾಟ ಕೆಲಸ ಮಾಡಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
`ಪಟ್ಟಣ ಪಂಚಾಯತದವರು ಹಂದಿ ಸಾಗಾಟಕ್ಕೆ ಸೂಕ್ತ ಸಮಯ ನೀಡಲಿಲ್ಲ. ಇನ್ನಷ್ಟು ದಿನ ಕಾಲಾವಕಾಶ ನೀಡಿದರೆ ನಾವೇ ಬೇರೆ ಕಡೆ ಸಾಗಿಸುತ್ತೇವೆ’ ಎಂದು ಸಾಕಾಣಿಕಾದಾರರು ಹೇಳಿದರು. `ಬೇರೆಯವರಿಗೆ ಹಂದಿ ಹಿಡಿಯಲು ಅವಕಾಶ ಕೊಡಬೇಡಿ’ ಎಂದು ಮನವಿ ಮಾಡಿದರು.
`ಸಾರ್ವಜನಿಕರಿಗೆ ತೊಂದರೆ ನೀಡುವ ನಿಟ್ಟಿನಲ್ಲಿ ಸಾಕಷ್ಟು ಹಂದಿಗಳಿವೆ. ಹಂದಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುವವರೆಗೂ ಕಾರ್ಯಾಚರಣೆ ನಡೆಯಲಿದೆ’ ಎಂದು ಪ ಪಂ ಮುಖ್ಯಾಧಿಕಾರಿ ಸಂತೋಷಕುಮಾರ ಎಚ್ ಹೇಳಿದ್ದಾರೆ.