ಬೆಳಂಬಾರದ ವಿಷ್ಣು ಬೋಟಿನ ಮಾಲಕರಾದ ಸುರೇಶ ಖಾರ್ವಿ ಹಾಗೂ ಅವರ ಮಗ ದರ್ಶನ ಖಾರ್ವಿ ಅವರು ಜಾತಿ ನಿಂದನೆ ಹಾಗೂ ಮೋಸ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಉಡುಪಿ ಬ್ರಹ್ಮಾವರದ ಜದೇಶ ಬಿ ಅವರು ಬೇರೆ ಜಾತಿ ಎಂಬ ಕಾರಣಕ್ಕೆ ಅವರ ಜೊತೆ ಮಾಡಿಕೊಂಡಿದ್ದ ಮೀನು ವ್ಯವಹಾರದ ಒಪ್ಪಂದವನ್ನು ಅವರು ಮುರಿದುಕೊಂಡಿದ್ದಾರೆ. ಮುಂಗಡವಾಗಿ ನೀಡಿದ್ದ 3 ಲಕ್ಷ ರೂ ಹಣವನ್ನು ಸಹ ಮರಳಿಸದೇ ಮೋಸ ಮಾಡಿದ ಬಗ್ಗೆ ಜದೀಶ ಬಿ ಅವರು ದೂರಿದ್ದಾರೆ.
ಅಂಕೋಲಾ ಬೆಳಂಬಾರ ಬಂದರಿನ ಸುರೇಶ ಖಾರ್ವಿ ಹಾಗೂ ದರ್ಶನ ಖಾರ್ವಿ ಅವರು ವಾಸವಾಗಿದ್ದಾರೆ. ಅವರಿಬ್ಬರು ಮೀನುಗಾರರಾಗಿದ್ದು, ವಿಷ್ಣು ಎಂಬ ಬೋಟು ನಡೆಸುತ್ತಿದ್ದಾರೆ. ಉಡುಪಿ ಬ್ರಹ್ಮಾವರದ ಜದೇಶ ಬಿ ಅವರು ಮೀನು ವ್ಯವಹಾರ ಮಾಡಿಕೊಂಡಿದ್ದು, 2022ರ ಜುಲೈ ತಿಂಗಳಿನಲ್ಲಿಯೇ ಅವರು ಸುರೇಶ ಖಾರ್ವಿ ಹಾಗೂ ದರ್ಶನ ಖಾರ್ವಿ ಅವರನ್ನು ಭೇಟಿ ಮಾಡಿದ್ದಾರೆ. ಆ ವೇಳೆ ಮೀನು ಖರೀದಿಸುವ ಮಾತುಕಥೆ ನಡೆಸಿ 3 ಲಕ್ಷ ರೂ ಹಣವನ್ನು ಮುಂಗಡವಾಗಿ ನೀಡಿದ್ದಾರೆ. ಆದರೆ, 2026 ಸಮೀಪಿಸಿದರೂ ಸುರೇಶ ಖಾರ್ವಿ ಹಾಗೂ ದರ್ಶನ ಖಾರ್ವಿ ಅವರು ಮೀನು ಸರಬರಾಜು ಮಾಡಿಲ್ಲ. ಕೊಟ್ಟ ಹಣವನ್ನು ಸಹ ಮರಳಿಸಿಲ್ಲ.
ಹೀಗಿರುವಾಗ 2026ರ ನವೆಂಬರ್ 11ರಂದು ಜದೀಶ ಬಿ ಅವರು ಸುರೇಶ ಖಾರ್ವಿ ಅವರನ್ನು ಭೇಟಿ ಮಾಡಿದ್ದಾರೆ. ಆಗ, ಸುರೇಶ ಖಾರ್ವಿ ಅವರು `ನೀ ದರ್ಶನ ಖಾರ್ವಿ ಅವರಿಗೆ ಹಣ ವರ್ಗಾಯಿಸಿದ್ದು, ಈ ವಿಷಯದ ಬಗ್ಗೆ ಅಲ್ಲಿಯೇ ವಿಚಾರಿಸು’ ಎಂದು ಹೇಳಿದ್ದಾರೆ. ಜೊತೆಗೆ `ನೀವು ಖಾರ್ವಿ ಸಮುದಾಯದ ಮೀನುಗಾರನಲ್ಲ. ಕೊರಗ ಸಮುದಾಯದವನಾಗಿದ್ದು, ನಿನ್ನೊಂದಿಗೆ ವ್ಯವಹಾರ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. `ನೀ ಕೊಟ್ಟ ಹಣಪಡೆದ ನಂತರ ದಿವಾಳಿ ಆಗಿದ್ದು, ನಿನಗೂ ಮೀನು ವ್ಯಾಪಾರ ನಡೆಸಲು ಬಿಡುವುದಿಲ್ಲ’ ಎಂದು ದರ್ಶನ ಖಾರ್ವಿ ಬೆದರಿಕೆ ಹಾಕಿದ್ದಾರೆ. ಜೊತೆಗೆ `ಪೆಟ್ರೊಲ್ ಹಾಕಿ ಸುಡುವೆ’ ಎಂದು ಆ ಅಪ್ಪ-ಮಗ ಜೀವ ಬೆದರಿಕೆ ಒಡ್ಡಿರುವುದಾಗಿ ಜದೀಶ ಬಿ ಅವರು ದೂರಿದ್ದಾರೆ.
ಮೀನುಗಾರಿಕೆಗಾಗಿ 20 ಕಾರ್ಮಿಕರನ್ನು ನೇಮಿಸಿಕೊಂಡಿದ್ದ ಜದೀಶ ಬಿ ಅವರು ಸದ್ಯ ನಷ್ಟದಲ್ಲಿದ್ದಾರೆ. ಕಾರ್ಮಿಕರಿಗೆ ಸಂಬಳ ಕೊಡಲು ಆಗದೇ ಸಮಸ್ಯೆ ಅನುಭವಿಸಿದ್ದಾರೆ. ತಮಗಾದ ಮೋಸದ ಬಗ್ಗೆ ಅವರು ಅಂಕೋಲಾ ಪೊಲೀಸರಿಗೆ ದೂರಿದ್ದು, ದಲಿತ ಎಂಬ ಕಾರಣಕ್ಕೆ ಮೀನು ವ್ಯಾಪಾರ ನಡೆಸದೇ ಅನ್ಯಾಯ ಮಾಡಿದ ವಿಷಯ ಹೇಳಿದ್ದಾರೆ. ಜದೀಶ ಬಿ ಅವರ ದೂರು ಆಲಿಸಿದ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.