ಮುಟ್ಟಳ್ಳಿ ಬೈಪಾಸ್ ಸೇತುವೆ ಸಮೀಪ ಕಾರು ಮತ್ತು ಪಿಕಪ್ ವಾಹನದ ನಡುವೆ ಅಪಘಾತ ನಡೆದಿದೆ. ಈ ಮುಖಾಮುಖಿ ಡಿಕ್ಕಿಯಲ್ಲಿ ಏಳು ಜನ ಗಾಯಗೊಂಡಿದ್ದಾರೆ.
ಕೇರಳ ಮೂಲದ ಮಿಸ್ರಿಯಾ ಅವರು ಚಲಾಯಿಸುತ್ತಿದ್ದ ಹ್ಯುಂಡೈ ವೆನ್ಯೂ ಕಾರು ಕುಂದಾಪುರದಿAದ ಭಟ್ಕಳದತ್ತ ಬರುತ್ತಿದ್ದಾಗ ಈ ಅವಘಡ ನಡೆದಿದೆ. ಮುಟ್ಟಳ್ಳಿ ಬೈಪಾಸ್ ಸೇತುವೆ ಬಳಿ ಎದುರಿನಿಂದ ಬರುತ್ತಿದ್ದ ಮಹೀಂದ್ರಾ ಬೊಲೆರೊ ಪಿಕಪ್ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ.
ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳಲ್ಲಿದ್ದ ಒಟ್ಟು ಏಳು ಮಂದಿ ಗಾಯಗೊಂಡಿದ್ದಾರೆ. ಪಿಕಪ್ ಚಾಲಕ ಶಿರಾಲಿ ಶಾರದಾ ಹೊಳೆಯ ರವೀಂದ್ರ ಮಂಜಪ್ಪ ನಾಯ್ಕ (43) ಹಾಗೂ ಸಹಪ್ರಯಾಣಿಕ ಸುಬ್ರಾಯ ಕೃಷ್ಣ ಮೊಗೇರ ಗಾಯಗೊಂಡಿದ್ದು ಅವರು ಆಸ್ಪತ್ರೆ ಸೇರಿದ್ದಾರೆ. ಕಾರಿನಲ್ಲಿದ್ದ ಕೇರಳ ಮೂಲದ ಫಾತಿಮಾ ಮರ್ವಾ, ಫಾತಿಮಾ ಎ ಎ, ಅಫ್ರಾ, ಆಫ್ರಿದ್ ಮತ್ತು ರಿಮ್ಸಾ ಅವರಿಗೂ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊAಡಿದ್ದು, ಏರ್ಬ್ಯಾಗ್ಗಳು ತೆರೆದುಕೊಂಡಿವೆ. ಇದರಿಂದ ಕಾರಿನಲ್ಲಿದ್ದವರು ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ಪಿಕಪ್ ಚಾಲಕ ರವೀಂದ್ರ ನಾಯ್ಕ ನೀಡಿದ ದೂರಿನ ಮೇರೆಗೆ ಭಟ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.