ಕಾರಿನಲ್ಲಿದ್ದ ಹಣ ಕಳವಾದ ವಿಚಾರವಾಗಿ ಇಬ್ಬರು ಹಳೆಯ ಸ್ನೇಹಿತರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಮಲ್ಲಾಪುರದಲ್ಲಿ ಸ್ನೇಹಿತರ ನಡುವೆ ಹೊಡೆದಾಟ ನಡೆದಿದೆ.
ನವೆಂಬರ್ 14ರಂದು ಮಲ್ಲಾಪುರಕ್ಕೆ ಬಂದಿದ್ದ ಕದ್ರಾದ ಟ್ಯಾಕ್ಸಿ ಚಾಲಕ ಅಭಿಲಾಷ ಪಾಟೀಲ (34) ಮತ್ತು ಮಲ್ಲಾಪುರದ ಕೈಗಾ ದಿನಗೂಲಿ ಕಾರ್ಮಿಕ ಗಣೇಶ ಕಾಮಕರ (34) ಹಳೆಯ ಪರಿಚಯದ ಸ್ನೇಹಿತರಾಗಿದ್ದರು. ಅವರಿಬ್ಬರು ಒಟ್ಟಿಗೆ ಮದ್ಯ ಸೇವಿಸಿದ್ದರು. ಈ ವೇಳೆ ಅಭಿಲಾಷ ತನ್ನ ಕಾರನ್ನು ಲಾಕ್ ಮಾಡಿಕೊಂಡು ಬರುವಂತೆ ಗಣೇಶನಿಗೆ ಕಾರಿನ ಕೀ ನೀಡಿದ್ದರು. ಗಣೇಶ ಕಾರನ್ನು ಲಾಕ್ ಮಾಡಿ ಕೀ ಮರಳಿಸಿದ್ದರು. ಬಳಿಕ ಲಕ್ಷ್ಮೀನಗರ ಬಸ್ಸ್ಟಾಪ್ ಎದುರು ಇಬ್ಬರೂ ಇದ್ದಾಗ ಕಾರಿನಲ್ಲಿದ್ದ ಹಣದ ವಿಚಾರ ಪ್ರಸ್ತಾಪವಾಗಿದೆ. ಕಾರಿನ ಡ್ಯಾಶ್ಬೋರ್ಡ್ನಲ್ಲಿದ್ದ 3000 ರೂ ಕಾಣೆಯಾಗಿರುವುದನ್ನು ಗಮನಿಸಿದ ಅಭಿಲಾಷ ಅವರನ್ನು ಗಣೇಶ ಅವರನ್ನು `ಹಣ ತೆಗೆದುಕೊಂಡಿದ್ದೀಯಾ? ಎಂದು ಪ್ರಶ್ನಿಸಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಈ ಸಂಬoಧ ಗಣೇಶ ಕಾಮಕರ ಅವರು ನೀಡಿದ ದೂರಿನ ಮೇರೆಗೆ ಅಭಿಲಾಷ ಪಾಟೀಲ ವಿರುದ್ಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಭಿಲಾಷ ಪಾಟೀಲ ನೀಡಿದ ದೂರಿನ ಮೇರೆಗೆ ಗಣೇಶ ಕಾಮಕರ ಸೇರಿದಂತೆ ಪ್ರದೀಪ್ ಕಾಮಕರ್, ಪರಶುರಾಮ್ ಉಪ್ಪಾರ, ಹನುಮಂತ ಗುರಿಕಾರ, ಮಂಜುನಾಥ್ ಸುಳಿಧರ್, ನಾಜು, ಪ್ರಶಾಂತ್ ವಿಜಯ್ ಹಾಗೂ ನಿಯಾಜ್ ಹರ್ಲಿ ವಿರುದ್ಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.