ಆರ್ಥಿಕ ಸಂಕಷ್ಟ ಹಾಗೂ ಸರ್ಕಾರಿ ನಿಯಮ ಉಲ್ಲಂಘನೆ ಕಾರಣದಿಂದ ಅಂಕೋಲಾದ ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಬಾಗಿಲು ಮುಚ್ಚಿದೆ. ಈ ಸಂಘವನ್ನು ಸಂಪೂರ್ಣವಾಗಿ ಸಮಾಪನೆಗೊಳಿಸಲು ಸರ್ಕಾರ ಮುಂದಾಗಿದೆ.
ಅoಕೋಲಾದ ಕಾಕರಮಠ ರಸ್ತೆಯಲ್ಲಿ ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕೆಲಸ ನಿರ್ವಹಿಸುತ್ತಿತ್ತು. ಕರ್ನಾಟಕ ರಾಜ್ಯ ಸೌಹರ್ದ ಸಹಕಾರಿ ಸಂಘಗಳ ಕಾಯ್ದೆ 1997 ರಡಿಯಲ್ಲಿ ಈ ಸಂಘ ನೋಂದಣಿಯೂ ಆಗಿತ್ತು. 2004ರ ಅವಧಿಯಲ್ಲಿ ನೋಂದಣಿ ಆದ ಸಂಘ ಆರ್ಥಿಕ ಶಿಸ್ತು ಕಾಪಾಡಿರಲಿಲ್ಲ. ಜೊತೆಗೆ ಸಂಘದ ಬೈಲಾಗಳನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ.
ಈ ಸಹಕಾರಿಯು ಬೈಲಾ ರೀತಿಯಂತೆ ಕಾರ್ಯನಿರ್ವಹಿಸದಿರುವುದು ಸರ್ಕಾರದ ಗಮನಕ್ಕೂ ಬಂದಿತ್ತು. ಅದಾದ ನಂತರ ಸಂಘವೇ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿತ್ತು. ಈ ಹಿನ್ನಲೆ ಸರ್ಕಾರವೇ ಸದ್ಯ ಅಂಕೋಲಾದ ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಸಮಾಪನೆಗೆ ಮುಂದಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಹಾಗೂ ಸಂಘದ ಸದಸ್ಯರಿಗೆ ಮಾಹಿತಿಯನ್ನು ರವಾನಿಸಿದೆ.
ಅಂಕೋಲಾದ ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ಸಂಘವೂ ಕುಮಟಾ ಉಪವಿಭಾಗದ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಅಲ್ಲಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆ ನೀಡಿದ್ದು, ಅದರ ಮೂಲಕ ಸಂಘದ ಸಮಾಪನೆ ಬಗ್ಗೆ ಆಕ್ಷಪಣೆ ಇದ್ದರೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸಹ ಅಕ್ಟೊಬರ್ 30 ಕೊನೆ ದಿನ. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕುಮಟಾ ಉಪ ವಿಭಾಗ ಕಚೇರಿಗೆ ದಾಖಲೆಗಳೊಂದಿಗೆ ಆಕ್ಷೆಪಣೆ ಸಲ್ಲಿಸಲು ಕೊನೆಯ ಅವಕಾಶ ನೀಡಲಾಗಿದೆ.