ಯಲ್ಲಾಪುರ-ಅಂಕೋಲಾದ ಕೈಗಾಡಿ ಹೊಳೆಯಲ್ಲಿ ಶವವಾಗಿದ್ದ ಸಾಗರ ದೇವಾಡಿಗ ಅವರ ಪ್ರಕರಣ ಹೊಸ ತಿರುವುಪಡೆದಿದೆ. `ಸಾಗರ ದೇವಾಡಿಗ ಅವರನ್ನು ಸ್ನೇಹಿತರೆಲ್ಲರೂ ಸೇರಿ ಕೊಲೆ ಮಾಡಿದ್ದಾರೆ’ ಎಂದು ಸಾಗರ್ ದೇವಾಡಿಗ ಅವರ ತಂದೆ ರಾಮಾ ದೇವಾಡಿಗ ದೂರಿದ್ದಾರೆ. ಕೊಲೆ ಪ್ರಕರಣ ದಾಖಲಿಸದ ಅಂಕೋಲಾ ಪೊಲೀಸರ ವಿರುದ್ಧವೂ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.
ಸ್ನೇಹಿತರ ಹುಟ್ಟುಹಬ್ಬ ಆಚರಣೆಗಾಗಿ ಯಲ್ಲಾಪುರ ಪಟ್ಟಣದ ಸಬಗೇರಿಯ ಸಾಗರ ದೇವಾಡಿಗ ಅವರು ಕೈಗಡಿ ಹೊಳೆ ಬಳಿ ಹೋದಾಗ ಕಾಲು ಜಾರಿ ಬಿದ್ದ ಅನುಮಾನವಿತ್ತು. 3 ದಿನದ ನಂತರ ಅವರ ಶವ ಸಿಕ್ಕಿತ್ತು. ಆದರೆ ಇದೀಗ ಸಾಗರ ದೇವಾಡಿಗ ಅವರ ತಂದೆ `ತನ್ನ ಮಗ ಸಹಜವಾಗಿ ಸತ್ತಿಲ್ಲ. ಬರ್ತಡೆ ಪಾರ್ಟಿ ನೆಪದಲ್ಲಿ ಸ್ನೇಹಿತರೇ ಕೊಲೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. `ಅಕ್ಟೋಬರ್ 7ರಂದು ಸಾಗರ ದೇವಾಡಿಗ ಅವರಿಗೆ ಪುನಿತ್ ಅಶೋಕ ಗೊಂದಳೆ ಅವರು ಕರೆ ಮಾಡಿ, `ನನ್ನ ಹುಟ್ಟುಹಬ್ಬ ಇದೆ. ಕವಡಿಕೆರೆ ಬಳಿ ಪಾರ್ಟಿ ಮಾಡೋಣ ಬಾ’ ಎಂದಿದ್ದರು. ಪಾರ್ಟಿಗೆ ಕವಡಿಕೆರೆಗೆ ಹೋಗಬೇಕಿದ್ದ ಸಾಗರ ದೇವಾಡಿಗ ಕೈಗಡಿಗೆ ಹೋಗಿದ್ದು ಹೇಗೆ?’ ಎಂದು ರಾಮಾ ದೇವಾಡಿಗ ಪ್ರಶ್ನಿಸಿದ್ದಾರೆ.
`ಆ ದಿನ ಮಧ್ಯಾಹ್ನ 3ಗಂಟೆಗೆ ಮನೆಗೆ ಮರಳಬೇಕಿದ್ದ ಸಾಗರ ದೇವಾಡಿಗ ಸಂಜೆ ಆದರೂ ಬರಲಿಲ್ಲ. 6 ಗಂಟೆ ವೇಳೆಗೆ ರವಿ ದೇವಾಡಿಗ ಫೋನ್ ಮಾಡಿ ಸಾಗರ ದೇವಾಡಿಗ ಅವರು ನೀರಿನಲ್ಲಿ ಕಾಣೆಯಾದ ವಿಷಯ ತಿಳಿಸಿದರು. ಅದಾದ ನಂತರ ಪುನೀತ ಗೊಂದಳೆ ಜೊತೆ ದಿನೇಶ ಪ್ರಭಾಕರ ನಾಯ್ಕ, ವಿನೋದ ಗೊಂದಳೆ, ನಾಗರಾಜ ಭಟ್ಟ, ರಾಹುಲ್ ಜೊತೆ ಸಾಗರ ದೇವಾಡಿಗ ತೆರಳಿರುವುದು ಗೊತ್ತಾಯಿತು. ಅವರ ಜೊತೆ ಇನ್ನಷ್ಟು ಜನ ಹುಡುಕಾಟ ನಡೆಸಿದ್ದು, ಅನತಿ ದೂರದಲ್ಲಿ ಆಗ ಸಾಗರ ದೇವಾಡಿಗ ಅವರ ಪ್ಯಾಂಟ್, ಕನ್ನಡಕ, ಶೂ ಕಾಣಿಸಿದೆ. ಅದಾಗಿ ಮೂರು ದಿನದ ನಂತರ ಶವ ಸಿಕ್ಕಿದೆ. ಸ್ನೇಹಿತರು ಪೊಲೀಸ್ ಠಾಣೆಯಲ್ಲಿ ನೀಡಿದ ಹೇಳಿಕೆಯಲ್ಲಿ ಸಾಗರ ದೇವಾಡಿಗ ಈಜಲು ನದಿಗೆ ಇಳಿದ ಬಗ್ಗೆ ಮಾಹಿತಿಯಿದ್ದು, ಸಾಗರ ದೇವಾಡಿಗ ಅವರಿಗೆ ಈಜಲು ಬರುತ್ತಿರಲಿಲ್ಲ’ ಎಂದವರು ವಿವರಿಸಿದ್ದಾರೆ.
`5.30ಕ್ಕೆ ಸಾಗರ ದೇವಾಡಿಗ ನೀರಿನಲ್ಲಿ ಕಾಣೆಯಾದ ಬಗ್ಗೆ ಹೇಳಲಾಗಿದೆ. ಆದರೆ, 6 ಗಂಟೆ ಅವಧಿಗೆ ಸ್ನೇಹಿತರು ಪೊಲೀಸ್ ಹೇಳಿಕೆ ನೀಡಿದ್ದಾರೆ. ನೀರಿಗೆ ಮುಳುಗಿದ ಸ್ನೇಹಿತನ ಹುಡುಕಾಟ ನಡೆಸದೇ ಅರ್ದ ಗಂಟೆ ಅವಧಿಯಲ್ಲಿ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿರುವುದು ಅನುಮಾನಕ್ಕೆ ಕಾರಣ’ ಎಂದು ರಾಮಾ ದೇವಾಡಿಗ ಅವರು ಹೇಳಿದ್ದಾರೆ. `ಎಲ್ಲರೂ ಸೇರಿ ಸಾಗರ ದೇವಾಡಿಗ ಅವರನ್ನು ನೀರಿಗೆ ದೂಡಿ ಕೊಲೆ ಮಾಡಿದ್ದಾರೆ’ ಎಂದು ದೂರಿದ್ದಾರೆ. `ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಅಲ್ಲಿನ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ರಾಮಾ ದೇವಾಡಿಗ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.