`ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು ಎದುರಿಸುತ್ತಿರುವ ಅನ್ಯಾಯ, ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ಖಾಸಗಿ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಆಗುತ್ತಿರುವ ಶೋಷಣೆಯ ವಿರುದ್ಧ ಜನಶಕ್ತಿ ವೇದಿಕೆ ಧ್ವನಿ ಎತ್ತಿದೆ. ಈ ಬಗ್ಗೆ ಮಾಧವ ನಾಯಕ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರಲ್ಲಿ ವಿವರಿಸಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಜನಸಂಪರ್ಕ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಜನಶಕ್ತಿ ವೇದಿಕೆಯವರು ಲಿಖಿತ ಮನವಿ ಸಲ್ಲಿಸಿದರು. ಮಹಿಳೆಯರು ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳನ್ನು ಮೌಖಿಕವಾಗಿಯೂ ವಿವರಿಸಿದ ಸಂಬoಧಪಟ್ಟ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ದೂರಿದರು. ಮುಖ್ಯವಾಗಿ `ಅಂಕೋಲಾ ತಾಲ್ಲೂಕಿನ ಬೆಲೇಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೇಬಿಸ್ ಸೋಂಕಿತ ನಾಯಿಯ ಕಡಿತದಿಂದ ಮೃತಪಟ್ಟ ಶೋಭಾ ಪುರುಸಪ್ಪ ನಾಯಕ ಮತ್ತು ಸಾವಿತ್ರಿ ಪೇಟುಗೌಡ ಅವರ ಕುಟುಂಬಗಳಿಗೆ ಹತ್ತು ತಿಂಗಳು ಕಳೆದರೂ ನ್ಯಾಯಯುತ ಪರಿಹಾರ ದೊರೆತಿಲ್ಲ’ ಎಂಬ ವಿಷಯ ಪ್ರಸ್ತಾಪಿಸಿದರು. `ಈ ಹಿಂದೆ ಸಚಿವರ ಪ್ರಜಾ ಸೇವಾ ಸಭೆಯಲ್ಲಿಯೂ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಡಳಿತದ ಗಮನಕ್ಕೂ ತರಲಾಗಿತ್ತು. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳೂ ಪರಿಹಾರ ನೀಡುವಂತೆ ನಿರ್ದೇಶನ ನೀಡಿದ್ದರೂ ಬೆಲೇಕೇರಿ ಗ್ರಾಮ ಪಂಚಾಯಿತಿಯಲ್ಲಿ ಅನುದಾನದ ಕೊರತೆಯ ನೆಪವೊಡ್ಡಿ ಪರಿಹಾರ ಪಾವತಿಯನ್ನು ಮುಂದೂಡಲಾಗುತ್ತಿದೆ’ ಎಂದು ದೂರಿದರು.
`ಸರ್ಕಾರದ ಆದೇಶದಂತೆ ಮೃತರ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ನೀಡಬೇಕಾದ ಸಂದರ್ಭದಲ್ಲಿ ಹತ್ತು ತಿಂಗಳು ಕಳೆದರೂ ಹಣ ಸಿಗದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ’ ಎಂದು ಆಕ್ಷೇಪಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗದ ಅಧ್ಯಕ್ಷರು ಕೂಡಲೇ ಪರಿಹಾರ ವಿತರಿಸುವಂತೆ ಸಂಬoಧಪಟ್ಟವರಿಗೆ ನಿರ್ದೇಶನ ನೀಡಿದರು. `ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಪತ್ತೆಗಾಗಿ ಅಳವಡಿಸಿರುವ ಅತ್ಯಾಧುನಿಕ ಡಿಜಿಟಲ್ ಮ್ಯಾಮೋಗ್ರಫಿ ಯಂತ್ರ ಸುಮಾರು ಎರಡು ವರ್ಷಗಳಿಂದ ಬಳಕೆಯಾಗದೆ ಇದೆ’ ಎಂದು ಮಾಧವ ಬಿ ನಾಯಕ ಅಧ್ಯಕ್ಷರ ಗಮನಕ್ಕೆ ತಂದರು. `ಲಕ್ಷಾಂತರ ರೂಪಾಯಿ ಮೌಲ್ಯದ, ಮಹಿಳೆಯರ ಆರೋಗ್ಯ ರಕ್ಷಣೆಗೆ ಅತ್ಯಂತ ಉಪಯುಕ್ತವಾಗಿರುವ ಯಂತ್ರವನ್ನು ಸಾರ್ವಜನಿಕರ ಸೇವೆಗೆ ಬಳಸದೆ ಇಟ್ಟಿರುವುದು ದುರದೃಷ್ಟಕರ. ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಇಂತಹ ಯಂತ್ರಗಳ ಬಳಕೆ ಅತ್ಯಗತ್ಯ’ ಎಂದು ಒತ್ತಿಹೇಳಿದರು. ಈ ವಿಚಾರ ಕೇಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಾಗಲಕ್ಷ್ಮೀ ಚೌಧರಿ ಅವರು ವೈದ್ಯಕೀಯ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ ಪೂರ್ಣಿಮಾ ಅವರನ್ನು ತರಾಟೆಗೆ ತೆಗೆದುಕೊಂಡರು. `ಇತರ ಜಿಲ್ಲೆಗಳಲ್ಲಿ ಇಂತಹ ವೈದ್ಯಕೀಯ ಉಪಕರಣಗಳಿಗಾಗಿ ಬೇಡಿಕೆ ಇದ್ದರೂ ಲಭ್ಯವಿರುವ ಯಂತ್ರವನ್ನು ಬಳಸಿಕೊಳ್ಳದೆ ಇರುವುದು ಸರಿಯಲ್ಲ. ಆದಷ್ಟು ಬೇಗ ಯಂತ್ರವನ್ನು ಕಾರ್ಯಾರಂಭಗೊಳಿಸಿ ಜಿಲ್ಲೆಯ ಮಹಿಳೆಯರಿಗೆ ಆರೋಗ್ಯ ಸೇವೆ ಒದಗಿಸಬೇಕು’ ಎಂದು ಸೂಚಿಸಿದರು.
ದಾಂಡೇಲಿಯ ಎಚ್. ಶ್ರೀ ಎಸ್ ಎಚ್ ಸೊರಗಾವಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 27 ಶಿಕ್ಷಕಿಯರು ಎದುರಿಸುತ್ತಿರುವ ವೇತನ ಹಾಗೂ ಇತರ ಸೇವಾ ಸೌಲಭ್ಯಗಳ ಸಮಸ್ಯೆಗಳನ್ನೂ ಮಾಧವ ಬಿ ನಾಯಕ ಪ್ರಸ್ತಾಪಿಸಿದರು. ಖಾಸಗಿ ಶಾಲೆಗಳಲ್ಲಿ ದುಡಿಯುವ ಮಹಿಳಾ ಶಿಕ್ಷಕಿಯರಿಗೆ ಕಾನೂನುಬದ್ಧ ಕನಿಷ್ಠ ವೇತನ ಹಾಗೂ ಇತರ ಸೌಲಭ್ಯಗಳನ್ನು ಒದಗಿಸದಿರುವ ಬಗ್ಗೆ ವಿವರಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗದ ಅಧ್ಯಕ್ಷರು ಸಂಬAಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿಯರು ಎದುರಿಸುತ್ತಿರುವ ಸಮಸ್ಯೆಗಳನ್ನೂ ಮನವಿಯಲ್ಲಿ ವಿವರಿಸಲಾಯಿತು. ಕನಿಷ್ಠ ವೇತನ, ಪಿಎಫ್, ಇಎಸ್ಐ ಸೌಲಭ್ಯಗಳು, ರಜೆಗಳಲ್ಲಿನ ತಾರತಮ್ಯ, ಋತುಚಕ್ರದ ರಜೆ ಹಾಗೂ ಸಾಂದರ್ಭಿಕ ರಜೆಗಳ ವಿಚಾರದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಮಾಧವ ಬಿ ನಾಯಕ ಗಮನಕ್ಕೆ ತಂದರು. `ಮಹಿಳಾ ಸಿಬ್ಬಂದಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ನಿರಾಕರಿಸುವುದು ಸರಿಯಲ್ಲ’ ಎಂದು ಒತ್ತಿಹೇಳಿದರು.
ಈ ಎಲ್ಲ ಸಮಸ್ಯೆಗಳನ್ನು ಆಲಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಸಂಬAಧಪಟ್ಟ ಅಧಿಕಾರಿಗಳಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ದೊರಕಿಸುವ ಭರವಸೆ ನೀಡಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಜನಶಕ್ತಿ ವೇದಿಕೆಯ ವತಿಯಿಂದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರಿಗೆ ಕನ್ನಡದ ಧ್ವಜ ನೀಡಿ, ತ್ರಿವರ್ಣ ಪೇಟ ತೊಡಿಸಿ, ಏಲಕ್ಕಿ ಹಾರ ಹಾಕಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ವಿಶೇಷತೆಯಾದ ಜಾಜಿ ಮಲ್ಲಿಗೆ ಹೂವು ಹಾಗೂ ಜಿಲ್ಲೆಯ ಸಾಂಪ್ರದಾಯಿಕ ರುಚಿಯ ಪ್ರತೀಕವಾದ ಅಪ್ಪೆಮಿಡಿ ಉಪ್ಪಿನಕಾಯಿಯನ್ನು ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಾ ನಾಯ್ಕ, ಜನಶಕ್ತಿ ವೇದಿಕೆಯ ಕಾರ್ಯಾಧ್ಯಕ್ಷರಾದ ನಿತ್ಯಾನಂದ ನಾಯ್ಕ, ಸುರೇಶ್ ನಾಯ್ಕ್, ಸಿ.ಎನ್. ನಾಯ್ಕ, ವಿನಯ ನಾಯ್ಕ, ಖೈರುನ್ನಿಸಾ ಶೇಖ್, ಅಲ್ತಾಫ್ ಶೇಖ್, ಇಮ್ತಿಯಾಜ್ ಬುಖಾರಿ, ರಾಜೇಶ್ ಬಾಡ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.