ಗಣಪತಿಗಲ್ಲಿಯಲ್ಲಿ ವಾಸವಾಗಿರುವ ದಿಲೀಪ ಗೋಸಾವಿ ಹಾಗೂ ಕುಮಾರ ಪಡಿಯಾರ್ ಅವರು ಗುಜುರಿ ಸಂಗ್ರಹ ನೆಪದಲ್ಲಿ ಮನೆ ಮನೆಗೆ ಬರುತ್ತಿದ್ದು, ಯಾರೂ ಇಲ್ಲದ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದಾರೆ. ವಜ್ರಳ್ಳಿ-ಹೊನಗದ್ದೆಯ ಗಿರೀಶ ಭಟ್ಟ ಅವರ ಮನೆಗೂ ನುಗ್ಗಿ ಅವರಿಬ್ಬರು ದೋಚಿರುವುದು ದೃಢವಾಗಿದೆ.
ಯಲ್ಲಾಪುರದ ವಜ್ರಳ್ಳಿ ಹೊನಗದ್ದೆಯ ಗಿಡಗಾರಿ ಗಿರೀಶ ಶಂಕರ ಭಟ್ಟ (ಮಂಜುನಾಥ) ಅವರು ವಾಸವಾಗಿದ್ದಾರೆ. 41 ವರ್ಷದ ಅವರು ಪುರೋಹಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಸದ್ಯ ಯಲ್ಲಾಪುರದ ಅಜ್ಜಪ್ಪನಕೆರೆ ದೇವಸ್ಥಾನ ಪಕ್ಕದಲ್ಲಿ ಅವರು ವಾಸವಾಗಿದ್ದಾರೆ. ನವೆಂಬರ್ 1ರಂದು ಹೊನಗದ್ದೆಯಲ್ಲಿರುವ ಅವರ ಮನೆಯಲ್ಲಿದ್ದ ಅನೇಕ ವಸ್ತುಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಮನೆ ಹಿಂದಿನ ಚಿಲಕ ತೆಗೆದು ಒಳಗೆ ನುಗ್ಗಿದ ಕಳ್ಳರು ದೊಡ್ಡ ದೊಡ್ಡದ ಎರಡು ತಾಮ್ರದ ಹಂಡೆ ಕಬಳಿಸಿದ್ದಾರೆ. ಜೊತೆಗೆ ಅಲ್ಲಿದ್ದ ಕಡಬು ಮಾಡುವ ದಳ್ಳೆಯನ್ನು ದೋಚಿದ್ದಾರೆ. 8 ತಾಮ್ರದ ತೋಪು, ತಾಮ್ರದ ರಂಗೋಲಿ ತೋಪು, ದೇವರ ಮುಂದಿದ್ದ ಹಿತ್ತಾಳೆಯ ಜಗಟೆಯನ್ನು ಕಳ್ಳರು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ 250 ತಾಮ್ರದ ತಂಬಿಗೆ ಹಾಗೂ 250 ಹಿತ್ತಾಳೆ ತಂಬಿಗೆಯನ್ನು ಕದ್ದಿದ್ದಾರೆ. 30 ಹಿತ್ತಾಳೆ ದೀಪ, 21 ಹಿತ್ತಾಳೆಯ ಸೌಟುಗಳನ್ನು ಕಣ್ಮರೆ ಮಾಡಿದ್ದಾರೆ. ಇದರೊಂದಿಗೆ ಅಡುಗೆ ಮನೆಯಲ್ಲಿದ್ದ ಕುಕ್ಕರ್, ಗ್ಯಾಸ್ ಒಲೆಯ ಮೇಲಿದ್ದ ಬರ್ನರ್ ಜೊತೆ ನಾನ್ ಸ್ಟಿಕ್ ತವಾವನ್ನು ಕಳ್ಳರು ಎಗರಿಸಿದ್ದಾರೆ. ಕಾಣೆಯಾದ ಎಲ್ಲಾ ವಸ್ತುಗಳ ಪಟ್ಟಿ ಬರೆದ ಭಟ್ಟರಿಗೆ ಒಟ್ಟು 143 ಕೆಜಿ ತಾಮ್ರ ಹಾಗೂ 58 ಕೆಜಿ ಹಿತ್ತಾಳೆ ಸೇರಿ 83 ಸಾವಿರ ರೂ ಮೌಲ್ಯದ ಸಾಮಗ್ರಿ ಕಳ್ಳತನವಾದ ಬಗ್ಗೆ ಗೊತ್ತಾಗಿದೆ.
ಈ ಬಗ್ಗೆ ಗಿರೀಶ ಭಟ್ಟ ಅವರು ಯಲ್ಲಾಪುರ ಪೊಲೀಸರಿಗೆ ದೂರಿದ್ದು, ವಿಚಾರಣೆ ನಡೆಸಿದ ಪೊಲೀಸರಿಗೆ ಯಲ್ಲಾಪುರದ ಗಣಪತಿ ಗಲ್ಲಿಯಲ್ಲಿ ವಾಸವಾಗಿರುವ ದಿಲೀಪ ರಾಜೇಶ ಗೋಸಾವಿ ಅವರ ಮೇಲೆ ಅನುಮಾನ ಬಂದಿದೆ. 21 ವರ್ಷದ ದಿಲೀಪ ಗೋಸಾವಿ ಅವರು ಮನೆ ಮನೆಗೆ ಓಟಾಟ ನಡೆಸಿ ಗುಜುರಿ ಸಂಗ್ರಹಿಸುತ್ತಿದ್ದು, ಯಾರೂ ಇಲ್ಲದ ಮನೆಗೆ ನುಗ್ಗಿ ಕದಿಯುವುದನ್ನು ರೂಢಿಸಿಕೊಂಡಿದ್ದಾರೆ. ಅದರಂತೆ ಮುಂಡಗೋಡಿನ ಮುಂಡಗೋಡು ಬಸವನಗರದ ಕುಮಾರ ಬಾಲು ಪಡಿಯಾರ ಅವರು ಸದ್ಯ ಯಲ್ಲಾಪುರದ ಗೋಸಾವಿಗಲ್ಲಿಯಲ್ಲಿ ವಾಸವಾಗಿದ್ದು, ಅವರನ್ನು ಕರೆದೊಯ್ದು ಕಳ್ಳತನ ಮಾಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಸದ್ಯ ಕುಮಾರ ಪಡಿಯಾರ್ ಅವರನ್ನು ಬಂಧಿಸಿದ್ದಾರೆ. ಪೊಲೀಸರ ಬಗ್ಗೆ ಮಾಹಿತಿ ಅರಿತ ದಿಲೀಪ ಗೋಸಾವಿ ಓಡಿ ಪರಾರಿಯಾಗಿದ್ದಾರೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಗೀತಾ ಪಾಟೀಲ್ ಅವರ ಜೊತೆ ಸೇರಿ ಯಲ್ಲಾಪುರ ಪಿಐ ಸುರೇಶ ಕುಂಬಾರ್ ಅವರು ಆರೋಪಿಗಳ ಶೋಧ ಮಾಡಿದ್ದಾರೆ. ಪಿಸೈ ರಾಜಶೇಖರ ವಂದಲಿ, ಗಣಪತಿ ಶೇರುಗಾರ್, ಮಹಾವೀರ ಕಾಂಬ್ಳೆ ಅವರ ಜೊತೆ ಸಿಬ್ಬಂದಿ ಗೋಪಾಲ ಚೌಹಾಣ್, ಸಂತೋಷ ಬಾಳೇರ್, ಬಸವರಾಜ ಡಿಕೆ, ಮಾರುತಿ, ಪರಮೇಶ್ವರ ಕೆ ಹಾಗೂ ರೇಖಾ ಎಂ ಎಸ್ ಸೇರಿ ಕಳ್ಳನನ್ನು ಬಂಧಿಸಿದ್ದಾರೆ. ಕದ್ದ ಸಾಮಗ್ರಿಗಳನ್ನು ಅವರು ಜಪ್ತು ಮಾಡಿದ್ದಾರೆ.