`ಹಿಂದೂತ್ವ, ಹೋರಾಟ, ಬ್ರಾಹ್ಮಣತ್ವ ಎಂದು ಪರಿಚಯಿಸಿಕೊಂಡು ಬಂದ ನರಿಪ್ರಕಾಶ ಕೋಣೆಮನೆ ಕೋಟ್ಯಂತರ ರೂ ಮೋಸ ಮಾಡಿದ್ದು, ಅಂಥ ನಕಲಿ ಹಿಂದೂತ್ವವಾದಿಗಳ ಬಗ್ಗೆ ಜನ ಎಚ್ಚರಿಕೆಯಿಂದಿರಬೇಕು’ ಎಂದು ಖ್ಯಾತ ಉದ್ಯಮಿ ಎಚ್ ಎಲ್ ಶೆಟ್ಟಿ ಅವರು ಹೇಳಿದ್ದಾರೆ. ಶಿರಸಿಯಲ್ಲಿ ಜೀವ ಜಲ ಕಾರ್ಯಪಡೆಯ ಶ್ರೀನಿವಾಸ ಹೆಬ್ಬಾರ್ ಅವರ ಮುಂದಾಳತ್ವದಲ್ಲಿ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ಮಾತನಾಡಿದ ಎಚ್ ಎಸ್ ಶೆಟ್ಟಿ ಅವರು ಧರ್ಮ ಉಳಿಸುವುದಾಗಿ ಹೇಳಿಕೊಂಡು ಬಂದವರು ಹಣಪಡೆದು ತಮಗೆ ಮೋಸ-ಅನ್ಯಾಯ ಮಾಡಿದ ವಿಷಯಗಳನ್ನು ತೆರೆದಿಟ್ಟಿದ್ದಾರೆ.
`ಮೊದಲಿನಿಂದಲೂ ಕಾವಿ ಹಾಕಿದ ಸಂತರು ಇದ್ದಾರೆ. ಕಾವಿ ಧರಿಸಿದ ಕಳ್ಳರು ಇದ್ದಾರೆ. ಹಿಂದೂ ಧರ್ಮ ಉಳಿದಿದ್ದು ಸನ್ಯಾಸಿ ಹಾಗೂ ಬ್ರಾಹ್ಮಣರಿಂದ. ಧರ್ಮ ಹಾಳಾಗಿದ್ದು ಸಹ ಅವರಿಂದಲೇ’ ಎಂದು ಎಚ್ ಎಸ್ ಶೆಟ್ಟಿ ಅವರು ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹಿಂದೂತ್ವದ ನೆಲೆ ಇರುವ ಸ್ಥಳ. ಅನಂತಕುಮಾರ ಹೆಗಡೆ ಅಂಥವರು ಹಿಂದೂತ್ವಕ್ಕಾಗಿ ಇಲ್ಲಿ ಹೋರಾಟ ಮಾಡಿದ್ದಾರೆ. ಅನಂತಕುಮಾರ ಹೆಗಡೆ ಅವರ ರಾಜಕೀಯ ವಿಚಾರ ನಮಗೆ ಗೊತ್ತಿಲ್ಲ. ಆದರೆ, ಹಿಂದೂತ್ವದ ವಿಷಯದಲ್ಲಿ ಅವರು ಎಂದಿಗೂ ರಾಜಿ ಆಗಿಲ್ಲ. ಅನಂತಕುಮಾರ ಹೆಗಡೆ ಅವರು ತೆರೆಮರೆಗೆ ಸರಿದ ನಂತರ ನಕಲಿ ಹಿಂದೂತ್ವವಾದಿಗಳು ಮುನ್ನಲೆಗೆ ಬಂದಿದ್ದು, ಅಂಥವರು ಅನೇಕರಿಗೆ ಕೋಟ್ಯಾಂತರ ರೂ ಮೋಸ ಮಾಡಿದ್ದಾರೆ’ ಎಂದು ಎಚ್ ಎಸ್ ಶೆಟ್ಟಿ ಅವರು ಹೇಳಿದ್ದಾರೆ.
`ಮೂರು ವರ್ಷದ ಹಿಂದೆ ತಮ್ಮ ಪರಿಚಯಕ್ಕೆ ಬಂದ ಈ ನಕಲಿ ಹಿಂದೂತ್ವವಾದಿ ವಿವಿಧ ಪುಸ್ತಕ ತಂದು ಕೊಡುವುದು, ಬೇರೆ ಬೇರೆ ದೇವಾಲಯದ ಪ್ರಸಾದ ತಂದು ಕೊಡುವುದು ಮಾಡುತ್ತಿದ್ದರು. ತಾನೂ ಹಿಂದೂ, ತಾನೂ ಬ್ರಾಹ್ಮಣ ಎಂದು ಹೇಳಿಕೊಂಡು ಧರ್ಮ ರಕ್ಷಣೆ ಹೆಸರಿನಲ್ಲಿ ಹಣ ಒಯ್ಯುತ್ತಿದ್ದರು. ಆ ಮೂಲಕ ನನಗೆ 40 ಕೋಟಿ, ಶ್ರೀನಿವಾಸ ಹೆಬ್ಬಾರ್ ಅವರಿಗೂ 10 ಕೋಟಿ ಟೋಪಿ ಹಾಕಿದ್ದಾರೆ’ ಎಂದು ಸಾವಿರಾರು ಜನ ಸೇರಿದ ಸಭೆಯಲ್ಲಿ ಬಹಿರಂಗ ಭಾಷಣ ಮಾಡಿದ್ದಾರೆ. `ಅಂಥ ನರಿ ಬುದ್ದಿಯವರು ಇದೀಗ ಶಾಸಕ-ಸಂಸದರಾಗಲು ಪ್ರಯತ್ನ ಮಾಡುತ್ತಿದ್ದು, ಜನ ಜಾಗೃತರಾಗಿರಬೇಕು’ ಎಂದು ಕರೆ ನೀಡಿದರು. `ಹಿಂದೂ ಧರ್ಮದ ರಕ್ಷಣೆ ವಿಷಯದಲ್ಲಿ ನಮಗೂ ಅಪಾರ ಭಕ್ತಿ. ಹೀಗಾಗಿ ಹಿಂದೂತ್ವ ಹೋರಾಟ ಎಂದು ಬಂದವರನ್ನು ನಂಬಿದೆವು. ನಂತರ ಅವರ ನೈಜ ಬಣ್ಣ ಅರಿವಾಯಿತು’ ಎಂದು ಎಚ್ ಎಸ್ ಶೆಟ್ಟಿ ಅವರು ಹೇಳಿದ್ದಾರೆ.
`ಹಿಂದೂ ಧರ್ಮ ಉತ್ತಮವಾದ ತುಪ್ಪ ಇದ್ದ ಹಾಗೇ. ಅದು ಎಂದಿಗೂ ಹಾಳಾಗುವುದಿಲ್ಲ. ಅದನ್ನು ಸಂರಕ್ಷಿಸವಲ್ಲಿ ನಾವು ತಪ್ಪುತ್ತಿದ್ದೇವೆ. ಗುರುಗುಲ-ಮಠ ಮಂದಿರಗಳು ಹಿಂದೂ ಧರ್ಮವನ್ನು ಮುಂದಿನ ತಲೆಮಾರಿನವರಿಗೆ ಪರಿಚಯಿಸುವ ಪ್ರಯತ್ನ ಮಾಡಬೇಕು. ಗುರುಕುಲ ಪದ್ಧತಿಯ ಶಿಕ್ಷಣಕ್ಕೆ ಉತ್ತೇಜನ ಸಿಗಬೇಕು’ ಎಂದು ಅವರು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು. `ಹಿಂದೂಗಳಲ್ಲಿ ಶ್ರಮ ಸಂಸ್ಕೃತಿ ಕಡಿಮೆ ಆಗುತ್ತಿದೆ. ಕೃಷಿ ಪದ್ಧತಿ ದೂರವಾಗುತ್ತಿದೆ. ಅದನ್ನು ಸರಿದೂಗಿಸಿಕೊಂಡು ಹೋಗುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದು ಸಹ ಎಚ್ ಎಸ್ ಶೆಟ್ಟಿ ಅವರು ಹೇಳಿದ್ದಾರೆ.