30ನೇ ವಯಸ್ಸಿನಲ್ಲಿ ಗೋಕರ್ಣಕ್ಕೆ ಬಂದಿದ್ದ ಶ್ರೀಕಾಂತ ಬಳ್ಳಾರಿ ಅವರು ಆ ವೇಳೆ ಕಳ್ಳತನ, ಹಲ್ಲೆ ಹಾಗೂ ಮಾರಕಾಸ್ತ್ರ ಪ್ರಯೋಗ ಮಾಡಿ ಪರಾರಿಯಾಗಿದ್ದು, 60ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಅಡಗಿದ್ದ ಡಕಾಯಿತನನ್ನು ಹಿಡಿದ ಪೊಲೀಸರು ಕುಮಟಾ ಕೋರ್ಟಿಗೆ ಒಪ್ಪಿಸಿದ್ದಾರೆ.
1996ರಲ್ಲಿ ಕುಮಟಾದ ಗೋಕರ್ಣದಲ್ಲಿ ಗಲಾಟೆಯೊಂದು ನಡೆದಿತ್ತು. ಹುಬ್ಬಳ್ಳಿ ಗಾಂಧೀನಗರದ ಶ್ರೀಕಾಂತ ದೊಡ್ಡವೀರಪ್ಪ ಬಳ್ಳಾರಿ ಅವರು ಆ ವೇಳೆ ಗೋಕರ್ಣಕ್ಕೆ ಬಂದಿದ್ದರು. ಚಾಕು-ಚೂರಿ ಪ್ರಯೋಗ ಮಾಡಿ ಅವರು ಕಳ್ಳತನ ಪ್ರಯತ್ನ ನಡೆಸಿದ್ದರು. ಊರಿನವರೇ ಆಗ ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡಿದ್ದು, ಸಹಚರರ ಜೊತೆಯಿದ್ದ ಶ್ರೀಕಾಂತ ಬಳ್ಳಾರಿ ಅವರು ಓಡಿ ತಪ್ಪಿಸಿಕೊಂಡಿದ್ದರು. ಅದಾಗಿ, 30 ವರ್ಷ ಕಳೆದರೂ ಶ್ರೀಕಾಂತ ಬಳ್ಳಾರಿ ಅವರು ಸಿಕ್ಕಿಬಿದ್ದಿರಲಿಲ್ಲ.
ಅನಾಧಿಕಾಲದಿಂದಲೂ ಅಪರಾಧ ಪ್ರಕರಣವೊಂದು ಬಾಕಿಯಿರುವುದನ್ನು ಗೋಕರ್ಣ ಪೊಲೀಸರು ಗಂಭೀರವಾಗಿ ಪರಿಗಣಿಸಿದರು. ಪಿಸೈ ಸುನೀಲ ಎಂ ಎ ಅವರ ಜೊತೆ ರಾಜೇಶ ನಾಯ್ಕ, ವಸಂತ ನಾಯ್ಕ, ಶ್ರೀಕಾಂತ ಕಟಬರ ಸೇರಿ ವಿವಿಧ ಮಾಹಿತಿ ಸಂಗ್ರಹಿಸಿದರು. ಆರೋಪಿ ಶ್ರೀಕಾಂತ ಬಳ್ಳಾರಿ ಅವರು ಹುಬ್ಬಳ್ಳಿಯಲ್ಲಿ ಅಡಗಿರುವುದನ್ನು ಅವರು ಪತ್ತೆ ಮಾಡಿದರು. ತಾಂತ್ರಿಕ ಮಾಹಿತಿ ಆಧರಿಸಿ ಅವರ ಮೇಲೆ ದಾಳಿ ಮಾಡಿದರು. ಸಿಕ್ಕಿಬಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ಕುಮಟಾ ಕೋರ್ಟಿಗೆ ಹಾಜರುಪಡಿಸಿದರು.