`ಬೇಡ್ತಿ-ವರದಾ ನದಿ ಜೋಡಣೆ ಮಾಡುವ ಸಲುವಾಗಿ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ರಾಜ್ಯ ಸರ್ಕಾರ ಈಗಾಗಲೇ ಸಹಮತಿ ನೀಡಿದೆ’ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಹೇಳಿದ್ದಾರೆ. ಹೀಗಾಗಿ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮತೆ, ನದಿಯ ಸಹಜ ಹರಿವು ಹಾಗೂ ಜಿಲ್ಲೆಯ ಕೃಷಿ ಮತ್ತು ಕುಡಿಯುವ ನೀರಿನ ಮೇಲೆ ದುಷ್ಪರಿಣಾಮ ಬೀರುವ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಹಾವೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನದಿ ಜೋಡಣೆಗೆ ಸರ್ಕಾರ ಆಸಕ್ತಿವಹಿಸಿರುವುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. ಬೇಡ್ತಿ ನದಿ ತಿರುವು ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವಿರೋಧ ವ್ಯಕ್ತವಾಗುತ್ತಲೇ ಇದೆ. ಪರಿಸರವಾದಿಗಳು, ಮಠಾಧೀಶರು, ರೈತರು ಹಾಗೂ ವಿವಿಧ ಸಂಘಟನೆಗಳು ಯೋಜನೆಯನ್ನು ವಿರೋಧಿಸಿದರೂ ಆ ವಿರೋಧಕ್ಕೆ ಸರ್ಕಾರ ಬಗ್ಗಿಲ್ಲ. ಈ ಎಲ್ಲ ವಿರೋಧ ಮತ್ತು ಮನವಿಗಳ ನಡುವೆಯೂ ಡಿಪಿಆರ್ ಸಿದ್ಧತೆಗೆ ಸರ್ಕಾರ ಸಹಮತಿ ನೀಡಿರುವುದು ಉತ್ತರಕನ್ನಡದ ಹೋರಾಟಗಾರರ ನಿದ್ದೆಗೆಡಿಸಿದೆ.
ಯೋಜನೆಯ ಮುಂದಿನ ಪ್ರಕ್ರಿಯೆಗಳಿಗೆ ಸರ್ಕಾರ ವೇಗ ನೀಡುತ್ತಿರುವುದರಿಂದ ಸ್ಥಳೀಯ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹಾವೇರಿ ಜಿಲ್ಲೆಯಲ್ಲಿ ನೀರು ಶೇಖರಣಾ ಘಟಕಕ್ಕೆ ಸ್ಥಳ ಗುರುತಿಸುವುದು ಹಾಗೂ ಯೋಜನೆಗೆ ಸಂಬAಧಿಸಿದ ಸಮೀಕ್ಷೆ ಮತ್ತು ಅರಣ್ಯ ಇಲಾಖೆಯ ಅನುಮತಿಗಳ ಪ್ರಕ್ರಿಯೆಗಳೂ ಚರ್ಚೆಯಲ್ಲಿವೆ. ಯೋಜನೆ ಜಾರಿಯಾದಲ್ಲಿ ಬೇಡ್ತಿ ನದಿ ಪಾತ್ರದ ಅರಣ್ಯ ಪ್ರದೇಶ, ಜೀವವೈವಿಧ್ಯ ಹಾಗೂ ನದಿಯ ನೈಸರ್ಗಿಕ ಹರಿವಿನ ಮೇಲೆ ಪರಿಣಾಮ ಉಂಟಾಗಬಹುದು ಎಂಬುದು ಯೋಜನೆ ವಿರೋಧಿಗಳ ಪ್ರಮುಖ ಆತಂಕ. ಶಿರಸಿ, ಯಲ್ಲಾಪುರ, ಅಂಕೋಲಾ ಸೇರಿದಂತೆ ನದಿ ಜಲಾನಯನ ಪ್ರದೇಶದ ಜನಜೀವನ, ಕೃಷಿ, ಅಂತರ್ಜಲ ಮತ್ತು ಕರಾವಳಿಯ ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಬಿರುವ ಸಾಧ್ಯತೆಯಿದೆ.
ಮಳೆಗಾಲದಲ್ಲಿ ಸಮುದ್ರಕ್ಕೆ ಹರಿದುಹೋಗುವ ಹೆಚ್ಚುವರಿ ನೀರನ್ನು ಬರಪೀಡಿತ ಪ್ರದೇಶಗಳ ಬಳಕೆಗೆ ತಿರುಗಿಸುವುದು ಯೋಜನೆಯ ಉದ್ದೇಶ ಎಂಬುದು ಬೆಂಬಲಿಗರ ವಾದ. ಆದರೆ ನದಿಯ ನೀರನ್ನು ಬೇರೆಡೆಗೆ ತಿರುಗಿಸುವುದರಿಂದ ಕೆಳಭಾಗದ ನದಿ ಪಾತ್ರದ ಪರಿಸರ, ಮೀನುಗಾರಿಕೆ, ಅಂತರ್ಜಲ ಹಾಗೂ ಸ್ಥಳೀಯ ಜನರ ನೀರಿನ ಅಗತ್ಯಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎಂಬುದನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕೆಂಬುದು ವಿರೋಧಿಗಳ ಆಗ್ರಹ. ಈಗಾಗಲೇ ಬೇಡ್ತಿ ನದಿ ಉಳಿವಿಗಾಗಿ ಜಿಲ್ಲೆಯಾದ್ಯಂತ ಹಲವು ಹಂತದ ಹೋರಾಟಗಳು ನಡೆದಿವೆ. ಅದಾಗಿಯೂ, ಯೋಜನೆ ಮುಂದುವರೆಸಲು ಸರ್ಕಾರ ಆಸಕ್ತಿವಹಿಸಿರುವುದು ಆತಂಕಕ್ಕೆ ಕಾರಣವಾಗಿದೆ.