ವಿಪರೀತ ಸರಾಯಿ ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅಂಕೋಲಾದ ಯುವಕನನ್ನು ಕುಟುಂಬದವರು ಕಾರವಾರದ ಆಸ್ಪತ್ರೆಗೆ ಸೇರಿಸಿದ್ದು, ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಹೊರಬಿದ್ದ ಅವರು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ.
ಅಂಕೋಲಾದ ಅಡಿಗೋಣ ಬಳಿಯ ಹೆಗ್ರೆಯ ನಾಗೇಶ ಪುಕ್ಕಾ ಗೌಡ (27) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ತಮ್ಮ ದಿನದ ದುಡಿಮೆಯ ಬಹುಪಾಲು ಹಣವನ್ನು ಸರಾಯಿ ಅಂಗಡಿಗೆ ಸುರಿಯುತ್ತಿದ್ದರು. ಹೀಗಾಗಿ ನಾಗೇಶ ಗೌಡ ಅವರಿಗೆ ಅನಾರೋಗ್ಯ ಕಾಡಿತು. ಅಕ್ಟೊಬರ್ 17ರಂದು ಕುಟುಂಬದವರೆಲ್ಲ ಸೇರಿ ನಾಗೇಶ ಗೌಡ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ಆದರೆ, ಆಸ್ಪತ್ರೆಯಲ್ಲಿ ಜಗಳ ಮಾಡಿದ ನಾಗೇಶ ಗೌಡ ಅವರು ಅಲ್ಲಿರಲು ಒಪ್ಪಲಿಲ್ಲ. ಚಿಕಿತ್ಸೆಗೆ ಸಹ ಸ್ಪಂದಿಸಲಿಲ್ಲ. ಆಸ್ಪತ್ರೆಯೊಳಗೆ ಗಲಾಟೆ ಮಾಡಿದರು. ನಾಗೇಶ ಗೌಡ ಅವರ ರಂಪಾಟವನ್ನು ಅಲ್ಲಿನ ವೈದ್ಯಕೀಯ ಸಿಬ್ಬಂದಿಗೂ ಸಹಿಸಿಕೊಳ್ಳಲು ಆಗಲಿಲ್ಲ. ನಾಗೇಶ ಗೌಡ ಅವರು ಅಲ್ಲಿದ್ದವರಿಗೆಲ್ಲ ಬೈದು ಆಸ್ಪತ್ರೆಯಿಂದ ಹೊರಬಿದ್ದರು.
ಸರಾಯಿ ನಶೆ, ಅನಾರೋಗ್ಯದ ನಡುವೆಯೇ ಅವರು ಅಂಕೋಲಾ ಬಸ್ ಹತ್ತಿದರು. ಅಂಕೋಲಾದಿAದ ಗೋಕರ್ಣಕ್ಕೆ ಬರುವ ಬಸ್ಸಿನಲ್ಲಿದ್ದ ಅವರು ತಳ್ಳಿಗದ್ದೆ ಕ್ರಾಸಿನ ಬಳಿ ಬಸ್ಸಿನಿಂದ ಕೆಳಗೆ ಹಾರಿದರು. ಅಲ್ಲಿಂದ ಮುಂದೆ ರೈಲು ಹಳಿಗಳ ಮೇಲೆ ನಡೆಯಲು ಶುರು ಮಾಡಿದರು. ಸಂಜೆ ವೇಳೆ ಸಂಚರಿಸಿದ ರೈಲು ಅವರಿಗೆ ಗುದ್ದಿದ್ದು, ತಲೆಗೆ ಭಾರೀ ಪ್ರಮಾಣದ ಪೆಟ್ಟು ಮಾಡಿಕೊಂಡರು. ರಾತ್ರಿ ರೈಲು ಹಳಿ ಬಳಿ ಅವರ ಶವ ಕಾಣಿಸಿತು. ತಮ್ಮನ ಸಾವಿನ ಬಗ್ಗೆ ನಾಗಪ್ಪ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.