ಶಿರಸಿ-ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ವಡ್ಡಿಘಾಟ್ ತಿರುವಿನಲ್ಲಿ ಮೂರು ಬಾರಿ ಪಲ್ಟಿಯಾಗಿದೆ. ಬಸ್ಸು ಕಂದಕಕ್ಕೆ ಬಿದ್ದಿದ್ದರಿಂದ 49 ಪ್ರಯಾಣಿಕರಿಗೆ ಪೆಟ್ಟಾಗಿದೆ.
ಶನಿವಾರ ಸಂಜೆ ಈ ಬಸ್ಸು ಬಳ್ಳಾರಿಯಿಂದ ಶಿರಸಿಗೆ ಆಗಮಿಸಿತ್ತು. ಅದಾದ ನಂತರ ಕುಮಟಾಗೆ ಹೋಗಬೇಕಿದ್ದ ಬಸ್ಸು ವಡ್ಡಿಘಾಟ್ ಮಾರ್ಗವಾಗಿ ತೆರಳಿತು. ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ಬಸ್ಸನ್ನು ಕಾಡು ದಾರಿ ಮೂಲಕ ಸಾಗಿಸಲಾಯಿತು. ಬಸ್ಸಿನ ತುಂಬ ಪ್ರಯಾಣಿಕರಿದ್ದರು. ಅಪಾಯಕಾರಿ ತಿರುವುಗಳಿರುವ ಪ್ರದೇಶದಲ್ಲಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ದಟ್ಟ ಕಾಡಿನ ಪ್ರದೇಶದಲ್ಲಿ ಕತ್ತಲು ಆವರಿಸಿದ್ದು, ಬಸ್ಸು ರಸ್ತೆ ಬಿಟ್ಟು ಕಂದಕದ ಕಡೆ ವಾಲಿತು. ಬಸ್ಸಿನ ಜೊತೆ ಅದರ ಒಳಗಿದ್ದ ಪ್ರಯಾಣಿಕರು ಮೂರು ಬಾರಿ ಪಲ್ಟಿಯಾದರು.
ಸಂಜೆ 7ಗಂಟೆ ಅವಧಿಗೆ ಬಸ್ಸು ಕಂದಕಕ್ಕೆ ಬೀಳುವಾಗ ಪ್ರಯಾಣಿಕರು ಜೋರಾಗಿ ಕೂಗಿದರು. ಬಸ್ಸಿನ ಚಾಲಕ ಸಹ ಪೆಟ್ಟು ಮಾಡಿಕೊಂಡಿದ್ದರಿoದ ಮತ್ತೆ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಬಸ್ಸು ಪಲ್ಟಿಯಾದರೂ ಸಹ ಪ್ರಯಾಣಿಕರು ತಮ್ಮ ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡರು. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯರು ಬಸ್ಸಿನಿಂದ ಹೊರತೆಗೆದರು.
ಸದ್ಯ ವಿವಿಧ ವಾಹನಗಳ ಮೂಲಕ ಗಾಯಗೊಂಡವರನ್ನು ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರ ಜೊತೆ ಸಾರಿಗೆ ಇಲಾಖೆಯವರು ಸ್ಥಳಕ್ಕೆ ತೆರಳಿದ್ದಾರೆ.