ಬೆಂಗಳೂರಿನಿoದ ಗೋವಾಗೆ ತೆರಳುತ್ತಿದ್ದ SRS ಬಸ್ಸು ಯಲ್ಲಾಪುರದ ಹಳಿಯಾಳದ ಬಳಿ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಕಾರವಾರದ ಐವರು ಹಾಗೂ ಯಲ್ಲಾಪುರ ಹಾಗೂ ಭಟ್ಕಳದ ಒಬ್ಬರ ಜೊತೆ ಬೇರೆ ಬೇರೆ ಊರಿನ ಒಟ್ಟು 31 ಜನ ಗಾಯಗೊಂಡಿದ್ದಾರೆ.
ಅಕ್ಟೊಬರ್ 19ರ ನಸುಕಿನಲ್ಲಿ ಈ ಅಪಘಾತ ನಡೆದಿದೆ. ಬಸ್ಸು ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಸಿಂದಗಿಯ ಅಶೋಕ ಗೌಂಡಿ ಅವರು ಈ ಬಸ್ಸು ಓಡಿಸುತ್ತಿದ್ದರು. ಕಲಘಟಕಿಯಿಂದಲೂ ಜೋರಾಗಿ ಬಸ್ಸು ಓಡಿಸಿಕೊಂಡು ಬಂದ ಅವರು ಹಳಿಯಾಳ ತಿರುವಿನ ಬಳಿ ಲಾರಿಯೊಂದಕ್ಕೆ ವಾಹನ ಗುದ್ದಿದರು. ಅದಾದ ನಂತರ ರಸ್ತೆಯ ಬಲಬದಿಗೆ ತೆರಳಿ ಅಲ್ಲಿದ್ದ ಕಾಡು ಮರಕ್ಕೆ ಡಿಕ್ಕಿ ಹೊಡೆದರು.
ಆ ಡಿಕ್ಕಿ ರಭಸಕ್ಕೆ ಬಸ್ಸಿನ ಒಳಗಿದ್ದ ಕಾರವಾರ ಸದಾಶಿವಗಡದ ಇಂಜಿನಿಯರ್ ಗೌರೀಶ ನಾಯ್ಕ ಅವರ ಕಾಲಿಗೆ ಗಂಭೀರವಾಗಿ ಗಾಯವಾಯಿತು. ಇದರೊಂದಿಗೆ ಕಾರವಾರದ ಕೋಡಿಭಾಗ ತಾಮಸೆವಾಡದ ಇಂಜಿನಿಯರ್ ಪೂಜಾ ಪೆಡ್ನೇಕರ್ ಅವರು ಪೆಟ್ಟು ಮಾಡಿಕೊಂಡರು. ಕಾರವಾರದ ಅಮೂಲ್ಯಾ ಗುಡವೆಕರ್, ಕಾರವಾರ ನಂದನಗದ್ದಾದ ಬ್ಯಾಂಕ್ ನೌಕರ ಲಕ್ಷಿಕಾಂತ ಕಾಪಡಸಕರ, ಕಾರವಾರದ ಮತ್ತೊಬ್ಬ ಗೌರೀಶ ನಾಯ್ಕ ಸಹ ಗಾಯಗೊಂಡರು. ಬಸ್ಸಿನ ಒಳಗಿದ್ದ ಯಲ್ಲಾಪುರ ಇಡಗುಂದಿಯ ರವೀಶ ಭಾಗ್ವತ್ ಹಾಗೂ ಭಟ್ಕಳ ಕರಿಕಲ್ಲಿನ ಅಮಿತಾ ಖಾರ್ವಿ ಅವರಿಗೂ ಈ ಅಪಘಾತದಲ್ಲಿ ನೋವಾಯಿತು.
ಇದರೊಂದಿಗೆ ಬೆಂಗಳೂರಿನ ರಜನಿ ರೇವಣಕರ್, ಧಾರವಾಡದ ಸನಾರುಜ್ಜಿನ್ ಗೌಸ್, ಓಡಿಸ್ಸಾದ ಹರಿಶ್ಚಂದ್ರ ಸಾಹು, ಪ್ರಭುರಾಮ ಸಾಹು, ಬೆಂಗಳೂರಿನ ಪತ್ರಕರ್ತ ಸೆಲೆಸ್ಟಿಯಾ ಮಾರ್ಥಲಿನ್, ಬೆಂಗಳೂರಿನ ಶಿಕ್ಷಕಿ ಅಪೂರ್ವಾ ದೇಸಾಯಿ, ಪಣಜಿಯ ವ್ಯಾಪಾರಿ ಸುಮಿತ್ರಾ ಬಿಸ್ವಾಸ್, ಬೆಂಗಳೂರು ಜೆಪಿ ನಗರದ ನಾಜಿಮಾಭಾನು, ವಾಸ್ಕೋದ ವಿದ್ಯಾರ್ಥಿನಿ ಚಿಕಿತಾ ಲೆಮಾನ್ಸ್, ಕೇರಳದ ಇಂಜಿನಿಯರ್ ಸೋಹೇಬ್ ಉಮರ್ ಸಹ ಅಪಘಾತದಲ್ಲಿ ಗಾಯಗೊಂಡರು. ಗೋವಾದ ಇಂಜಿನಿಯರ್ ಅಭಿಜಿತ್ ನಾಯ್ಕ, ಕೇರಳದ ವ್ಯಾಪಾರಿ ಬಿಲಾಲ್ ಸಲಾಂ, ಬಿಜಾಪುರದ ಚಾಲಕ ಶಿವಕುಮಾರ, ಕಲಾಯಿಯ ವಿರಪ್ಪ ಹೊಸಮನಿ, ಕಾಣಕೋಣದ ಯಶ್ ನಾಯ್ಕ, ಓಡಿಸ್ಸಾದ ರಘುರಾಂ ಸಾಹು ಹಾಗೂ ಕಲಘಟಕಿಯ ಮಾಬೂಬ್ ಹಜರತ್ ಸಾಬ್ ಸಹ ಬಸ್ಸಿನಲ್ಲಿದ್ದು ಅಪಘಾತದಿಂದ ಗಾಯಗೊಂಡರು.
ಇನ್ನೂ ಹೆಸರು-ವಿಳಾಸ ಗೊತ್ತಾಗದ ಐವರು ಆ ಬಸ್ಸಿನಲ್ಲಿದ್ದರು. ಅವರಿಗೆ ಸಹ ಸಾಕಷ್ಟು ಪ್ರಮಾಣದಲ್ಲಿ ಪೆಟ್ಟಾಗಿದ್ದು, ಗಂಭೀರ ಗಾಯಗೊಂಡವರನ್ನು ಸದ್ಯ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಕೆಲವರು ದೊಡ್ಡದಾಗಿ ಕಿರುಚಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದರು. ಇನ್ನೂ ಕೆಲವರು ಕಿಟಕಿಗಳಿಂದ ದೇಹತೂರಿಸಿ ಹೊರ ಬಿದ್ದರು. ಅಪಘಾತದ ಪರಿಣಾಮ ಬಸ್ಸು ಸಂಪೂರ್ಣವಾಗಿ ಜಖಂ ಆಗಿದೆ. ಪಿಐ ರಮೇಶ ಹಾನಾಪುರ ಅವರ ಜೊತೆ ಪಿಐ ರಾಜಶೇಖರ ವಂದಲಿ ಸ್ಥಳ ಭೇಟಿ ಮಾಡಿದ್ದಾರೆ. ಪಿಎಸ್‌ಐ ಮಹಾವೀರ ಕಾಂಬಳೆ ತನಿಖೆ ನಡೆಸುತ್ತಿದ್ದಾರೆ.