ಯಲ್ಲಾಪುರದ ಗೌತಮ ಕೋಟೆಮನೆ ಅವರ ಕಾರಿಗೆ ಅಂಕೋಲಾ ಹಳವಳ್ಳಿಯ ದೇವೇಂದ್ರ ಸಿದ್ದಿ ಅವರ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ದೇವೇಂದ್ರ ಸಿದ್ದಿ ಅವರಿಗೆ ಪೆಟ್ಟಾಗಿದ್ದು, ಅವರ ವಿರುದ್ಧವೇ ಪೊಲೀಸ್ ಪ್ರಕರಣವೂ ದಾಖಲಾಗಿದೆ.
ಯಲ್ಲಾಪುರದ ದೆಹಳ್ಳಿ ಬಳಿಯ ಕಟ್ಟಿಗೆಯವರಾದ ಗೌತಮ ಚಂದ್ರಶೇಖರ ಕೋಟೆಮನೆ ಅವರು ಬೆಂಗಳೂರಿನಲ್ಲಿರುವ ಆದರ್ಶ ಡೆವಲಪರ್ಸ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಹಬ್ಬದ ಅವಧಿಯಲ್ಲಿ ಅವರು ಊರಿಗೆ ಬಂದಿದ್ದು, ಭಾನುವಾರ ರಾತ್ರಿ ಅವರು ಅಂಕೋಲಾದಿAದ ಯಲ್ಲಾಪುರ ಕಡೆ ಕಾರು ಓಡಿಸುತ್ತಿದ್ದರು. ಬಳಗಾರ್ ಕ್ರಾಸಿನಿಂದ 2ಕಿಮೀ ಮುಂದೆ ಬಂದಾಗ ಇನ್ನೂ ನೋಂದಣಿ ಇಲ್ಲದ ಹೊಂಡಾ ಶೈನ್ ಬೈಕ್ ಅವರ ಕಾರಿಗೆ ಗುದ್ದಿತು.
ರಸ್ತೆ ಎಡಬದಿಯಲ್ಲಿ ಚಲಿಸುತ್ತಿದ್ದ ಹಳ್ಳವಳ್ಳಿಯ ದೇವೇಂದ್ರ ನಾಗೇಶ ಸಿದ್ದಿ ಅವರು ತೀರಾ ಬಲಬದಿಗೆ ಬಂದು ತಮ್ಮ ಬೈಕನ್ನು ಕಾರಿಗೆ ಡಿಕ್ಕಿ ಹೊಡೆದರು. ಈ ಅಪಘಾತದಲ್ಲಿ ದೇವೇಂದ್ರ ಸಿದ್ದಿ ಅವರ ಹಣೆಗೆ ಪೆಟ್ಟಾಯಿತು. ಬೈಕಿನ ಜೊತೆ ಕಾರು ಅಲ್ಲಲ್ಲಿ ಜಖಂ ಆಯಿತು. ಈ ಅಪಘಾತದ ಬಗ್ಗೆ ಗೌತಮ ಕೋಟೆಮನೆ ಅವರು ತಮ್ಮ ತಂದೆ-ತಾಯಿ ಅವರಲ್ಲಿ ಹೇಳಿದ್ದು, ಅವರ ಸಲಹೆ ಪ್ರಕಾರ ಯಲ್ಲಾಪುರ ಪೊಲೀಸ್ ಠಾಣೆಗೆ ಬಂದರು. ನಡೆದ ಘಟನಾವಳಿಗಳ ಬಗ್ಗೆ ವಿವರಿಸಿ ಪ್ರಕರಣ ದಾಖಲಿಸಿದರು. ದೇವೇಂದ್ರ ಸಿದ್ದಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ದೇವೇಂದ್ರ ಸಿದ್ದಿ ಅವರನ್ನು ಮಾತನಾಡಿಸಿದ್ದಾರೆ.