ಹೊನ್ನಾವರ ಹಾಗೂ ಭಟ್ಕಳ ಭಾಗದದಲ್ಲಿ ಸ್ಕೂಟಿ ಕಳ್ಳರ ಕಾಟ ಹೆಚ್ಚಾಗಿದೆ. ಹೊನ್ನಾವರದ ವ್ಯಾಪಾರಿಯೊಬ್ಬರ ಸ್ಕೂಟಿ ಕಳ್ಳರ ಪಾಲಾಗಿದ್ದು, ಭಟ್ಕಳದ ವಕೀಲರ ಸ್ಕೂಟಿ ಕದಿಯುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.
ಹೊನ್ನಾವರದ ಮಡಿವಾಳ ಹಳ್ಳದ ವ್ಯಾಪಾರಿ ಪ್ರಕಾಶ ನಾಯ್ಕ ಅವರ ಸ್ಕೂಟಿಯನ್ನು ಕಳ್ಳರು ಕದ್ದಿದ್ದಾರೆ. ಅಕ್ಟೊಬರ್ 17ರಂದು ಮನೆ ಮುಂದೆ ನಿಲ್ಲಿಸಿದ 90 ಸಾವಿರದ ಸ್ಕೂಟಿ ಕಾಣೆಯಾಗಿದೆ. ಸುಜಕಿ ಎಕ್ಸಸ್ ಸ್ಕೂಟಿ ಎಲ್ಲಿ ಹುಡುಕಿದರೂ ಸಿಗದ ಕಾರಣ ಪ್ರಕಾಶ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸ್ಕೂಟಿ ಹುಡುಕಾಟ ನಡೆಸಿದ್ದಾರೆ.
ಭಟ್ಕಳ ವಕೀಲ ಮನೋಜ ನಾಯ್ಕ ಅವರ ಬಜಾಜ್ ಚೇತಕ್ ಸ್ಕೂಟರ್ ಕಳ್ಳತನಕ್ಕೆ ಕಳ್ಳರು ಪ್ರಯತ್ನಿಸಿದ್ದಾರೆ. ಸ್ಕೂಟರ್ ಕಳ್ಳತನ ಸಾಧ್ಯವಾಗದೇ ಇದ್ದಾಗ ಅದರ ನಂಬರ್ ಪ್ಲೇಟ್ ಕದ್ದೊಯ್ದಿದ್ದಾರೆ. ಈ ವಕೀಲರು ನಾಗಪ್ಪ ನಾಯ್ಕ ರಸ್ತೆಯ 1ನೇ ಕ್ರಾಸಿನಲ್ಲಿ ಮನೆ ಮಾಡಿಕೊಂಡಿದ್ದು, ಅಕ್ಟೊಬರ್ 19ರ ಸಂಜೆ 7 ಗಂಟೆಗೆ ಸ್ಕೂಟರ್ ಸರಿಯಾಗಿಯೇ ಇತ್ತು. 10.22ಕ್ಕೆ ನೋಡಿದಾಗ ಸ್ಕೂಟರ್ ಕಳ್ಳತನದ ವಿಫಲ ಪ್ರಯತ್ನ ವಕೀಲರ ಗಮನಕ್ಕೆ ಬಂದಿತು.
ಸ್ಕೂಟರ್ ಕದಿಯಲು ಸಾಧ್ಯವಾಗದ ಸಿಟ್ಟಿನಲ್ಲಿ ಅದರ ನಂಬರ್ ಪ್ಲೇಟ್’ನ್ನು ಕಿಲಾಡಿ ಕಳ್ಳರು ಕಿತ್ತಿದ್ದಾರೆ. ಕಳ್ಳರ ಕಾಟಕ್ಕೆ ಬೇಸತ್ತ ವಕೀಲ ಮನೋಜ ನಾಯ್ಕ ಅವರು ಭಟ್ಕಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಆ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.