ಭಟ್ಕಳದ ಜಾಲಿ ತೆಲಗೇರಿಯ ಕ್ರಿಕೆಟ್ ಮೈದಾನ ಪಕ್ಕ ಕಾನೂನುಬಾಹಿರವಾಗಿ ಹಣಕಟ್ಟಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಶೇಡಕುಳಿಯಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ನಾರಾಯಣ ಗೊಂಡ ಅವರು ಸಿಕ್ಕಿಬಿದ್ದಿದ್ದು, ಅವರ ಜೊತೆಯಿದ್ದ ಏಳು ಜನ ಪರಾರಿಯಾಗಿದ್ದಾರೆ.
ಭಟ್ಕಳದ ಜಾಲಿ ತೆಲಗೇರಿಯ ಕ್ರಿಕೆಟ್ ಮೈದಾನ ಪಕ್ಕದಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ಅಕ್ಟೊಬರ್ 19ರಂದು ಸಂಜೆ ಅಲ್ಲಿ ಮೊಂಬತ್ತಿಯ ಬೆಳಕು ಕಾಣುತ್ತಿತ್ತು. ಆ ಬೆಳಕು ಬಂದ ಕಡೆ ಭಟ್ಕಳ ಶಹರ ಪೊಲೀಸ್ ಉಪನಿರೀಕ್ಷಕ ನವೀನ್ ನಾಯ್ಕ ಅವರು ಹೋಗಿದ್ದರು. ಆ ಬೆಳಕಿನ ಅಡಿ ರದ್ದಿ ಪೇಪರ್ ಹಾಸಿಕೊಂಡು ಏಳು ಜನ ಕುಳಿತಿದ್ದರು. ಅವರೆಲ್ಲರೂ ಇಸ್ಪಿಟ್ ಎಲೆಗಳ ಜೊತೆ ಹಣಹರಡಿಕೊಂಡಿದ್ದರು.
ಪೊಲೀಸರು ಬಂದದನ್ನು ನೋಡಿ ತೆಲಗೇರಿಯಲ್ಲಿ ಸೆಂಟ್ರಿoಗ್ ಕೆಲಸ ಮಾಡುವ ಮಾದೇವ ಗೊಂಡ, ಹನುಮಾನ ನಗರದ ಶಂಕರ ನಾಯ್ಕ ಓಡಿ ಪರಾರಿಯಾದರು. ಅವರ ಜೊತೆ ಮತ್ತೆ ಮೂವರು ಓಡಿದ್ದು, ಪೊಲೀಸರ ಬಳಿ ಆ ಮೂವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ, ನಾರಾಯಣ ಗೊಂಡ ಅವರು ಮಾತ್ರ ಪೊಲೀಸರ ಬಳಿ ಸಿಕ್ಕಿಬಿದ್ದರು. `ಹಬ್ಬದ ಆಟ’ ಎಂದರೂ ಪೊಲೀಸರು ಅವರ ಮಾತು ಕೇಳಲಿಲ್ಲ. ಕಾನೂನುಬಾಹಿರ ಕೆಲಸ ಮಾಡಿದಕ್ಕಾಗಿ ಓಡಿದವರ ಜೊತೆ ಸಿಕ್ಕಬಿದ್ದವರ ಹೆಸರನ್ನು ದಾಖಲಿಸಿ ಪ್ರಕರಣ ದಾಖಲಿಸಿದರು.
ಅಲ್ಲಿ ಬಿದ್ದಿದ್ದ ಇಸ್ಪಿಟ್ ಎಲೆ, ಮೇಣದ ಬತ್ತಿ ಜೊತೆ 1700ರೂ ಹಣವನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು. ಸದ್ಯ ಓಡಿಹೋದವರ ಹುಡುಕಾಟ ಮುಂದುವರೆದಿದೆ. ಜೊತೆಗೆ ಹೆಸರು-ವಿಳಾಸ ಗೊತ್ತಿಲ್ಲದ ಮೂವರ ಶೋಧವೂ ನಡೆದಿದೆ.