ಉತ್ತರ ಕನ್ನಡವನ್ನು ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ ಮುಂದಿನ ಮೂರು ತಾಸಿನ ಒಳಗೆ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ವಿದ್ಯುತ್ ವ್ಯತ್ಯಯ, ಸಂಚಾರ ದಟ್ಟಣೆ ಹಾಗೂ ಅಲ್ಲಲ್ಲಿ ಮರದ ಕೊಂಬೆ ಬೀಳುವ ಅಪಾಯಗಳಿರುವ ಬಗ್ಗೆ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಎಚ್ಚರಿಸಿದೆ.
ಭಾರತ ಹವಾಮಾನ ಇಲಾಖೆ ಬೆಂಗಳೂರು ಹವಾಮಾನ ಕೇಂದ್ರ ನೀಡಿದ ಮಾಹಿತಿಗಳ ಪ್ರಕಾರ ಒಂದೆರಡು ಸ್ಥಳಗಳಲ್ಲಿ ಗುಡುಗು, ಮಿಂಚಿನ ಜೊತೆ ಹಗುರ ಮಳೆಯಾಗಲಿದೆ. ಜೊತೆಗೆ 30-40ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. `ಮಳೆ ಅವಧಿಯಲ್ಲಿ ಮನೆಯಿಂದ ಹೊರಹೋಗುವುದು ಸುರಕ್ಷಿತವಲ್ಲ. ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಡುವುದು ಒಳಿತು. ಸಾಧ್ಯವಾದಷ್ಟು ಪ್ರಯಾಣವನ್ನು ತಪ್ಪಿಸಿ. ಸುರಕ್ಷಿತ ಸ್ಥಳದಲ್ಲಿ ಆಶ್ರಯಪಡೆಯಿರಿ’ ಎಂದು ಸರ್ಕಾರ ಸೂಚಿಸಿದೆ.
`ವಿದ್ಯುತ್ ಉಪಕರಣಗಳನ್ನು ಬಂದ್ ಮಾಡಿ. ಜಲಮೂಲ ಪ್ರದೇಶಗಳ ಹತ್ತಿರವಿರಬೇಡಿ. ವಿದ್ಯುತ್ ಶಕ್ತಿ ಬಳಕೆಯಿಂದ ನಡೆಯುವ ಎಲ್ಲಾ ಉಪಕರಣಗಳಿಂದ ದೂರವಿರಿ. ಪ್ರಯಾಣದಲ್ಲಿರುವವರು ಅತ್ಯಂತ ಎಚ್ಚರಿಕೆಯಿಂದ ಪ್ರಯಾಣ ಮಾಡಿ’ ಎಂದು ಸೂಚಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ರಾಯಚೂರು, ವಿಜಯಪುರ, ಬಳ್ಳಾರಿ ಹಾಗೂ ದಾವಣಗೆರೆ ಭಾಗದಲ್ಲಿ ಮಳೆ ಲಕ್ಷಣಗಳಿವೆ.
ಅಕ್ಟೊಬರ್ 21ರಿಂದ 29ರವರೆಗೂ ರಾಜ್ಯದಲ್ಲಿ ಮಳೆ ಲಕ್ಷಣಗಳಿವೆ. ಮಧ್ಯಮ ಪ್ರಮಾಣದ ಮಳೆ ಬೀಳಲಿದ್ದು, ಅಕ್ಟೊಬರ್ 23 ಹಾಗೂ 24ರಂದು ಕರಾವಳಿ ಹಾಗೂ ಉತ್ತರ ಒಳನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.