ಪ್ರಪಂಚದಲ್ಲಿಯೇ ಅತಿ ದೊಡ್ಡದು ಎನಿಸಿದ ಪಾತರಗಿತ್ತಿ ಕಾರವಾರದಲ್ಲಿ ಕಾಣಿಸಿದೆ. ಹವ್ಯಾಸಿ ಛಾಯಾಗ್ರಾಹಕ ರವಿ ಗೌಡ ಅವರು ಗುಡ್ಡಳ್ಳಿಯಲ್ಲಿ ಚಿಟ್ಟೆಯ ಚಲನ-ವಲನ ಸೆರೆಹಿಡಿದಿದ್ದಾರೆ.
`ಅಟ್ಲಾಸ್ ಮೋತ್’ ಎಂದು ಕರೆಯಲ್ಪಟುವ ಈ ಪತಂಗ 24 ಸೆಂಟಿಮೀಟರ್’ವರೆಗೂ ಬೆಳೆಯುತ್ತದೆ. ಕಾರವಾರದಲ್ಲಿ ಕಾಣಿಸಿದ ಈ ಚಿಟ್ಟೆಯೂ ಅದೇ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿದ್ದು, ದೈತ್ಯ ಪತಂಗವಾಗಿ ಕಾಣಿಸಿದೆ. ಮಳೆಗಾಲದಲ್ಲಿ ಕರಾವಳಿ ವ್ಯಾಪ್ತಿಯ ಕಾಡುಗಳಲ್ಲಿ ಈ ಪತಂಗ ಕಾಣಿಸಿಕೊಳ್ಳುತ್ತದೆ. ಆದರೆ, ಈ ಕೀಟದ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡಿದವರ ಸಂಖ್ಯೆ ವಿರಳ.
ಈ ಪ್ರಬೇಧದ ಪಾತರಗಿತ್ತಿಯನ್ನು `ಪ್ರಪಂಚದಲ್ಲಿಯೇ ಬೃಹತ್ ಆಕಾರದ ಪತಂಗ’ ಎಂದು ಗುರುತಿಸಲಾಗಿದೆ. `ಈ ಪತಂಗದ ವೈಜ್ಞಾನಿಕ ಹೆಸರು ಂಣಣಚಿಛಿus ಚಿಣಟಚಿs ಎಂದಿದ್ದು, ಅವು ಮರಗಳ ಎಲೆಗಳ ಮೇಲೆ ಮೊಟ್ಟೆಯಿಟ್ಟು ಮರಿಗಳನ್ನು ಪೋಷಿಸುತ್ತದೆ. ಮೊಟ್ಟೆಯಿಂದ ಹೊರಬಂದ ಹುಳು (ಲಾರ್ವಾ) ಆ ಮರದ ಎಲೆಗಳನ್ನು ತಿಂದು ಶಕ್ತಿಯನ್ನು ಸಂಗ್ರಹಿಸಿ ಕೋಶವನ್ನು (ಕೋಕೂನ್) ರಚಿಸುತ್ತದೆ.
ಈ ಪತಂಗಕ್ಕೆ ಬಾಯಿ ಅಥವಾ ಜೀರ್ಣಾಂಗ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ಅದು ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗವಾದ ನಂತರ ಯಾವುದೇ ಆಹಾರವನ್ನು ತಿನ್ನುವುದಿಲ್ಲ. ಹುಳು ಆಗಿರುವಾಗಲೇ ಸಾಕಷ್ಟು ಎಲೆಗಳನ್ನು ತಿಂದು ತನಗೆ ಬೇಕಾದ ಎಲ್ಲ ಶಕ್ತಿಯನ್ನು ಸಂಗ್ರಹಿಸಿಟ್ಟುಕೊAಡಿರುತ್ತದೆ. ಹೀಗಾಗಿ ಈ ಕೀಟದ ಜೀವಿತಾವಧಿ 2 ವಾರ ಮಾತ್ರ.
ತನ್ನಲ್ಲಿ ಉಳಿದಿರುವ ಶಕ್ತಿಯನ್ನು ಉಳಿಸಿಕೊಳ್ಳಲು ಈ ಜೀವಿ ತುಂಬಾ ಕಡಿಮೆ ಹಾರಾಟ ಮಾಡುತ್ತದೆ. ಜೊತೆಗೆ ಹೆಚ್ಚಿನ ಸಮಯ ಎಲೆಗಳ ಮೇಲೆ ವಿಶ್ರಾಂತಿಯಲ್ಲಿರುತ್ತದೆ. ದಿನಗಳು ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗವು ಹಕ್ಕಿಗಳು, ಓತಿ ಮತ್ತು ಇರುವೆಗಳಿಗೆ ಆಹಾರವಾಗುವ ಸಾಧ್ಯತೆಗಳೇ ಹೆಚ್ಚಿದೆ ಎಂದು ಕೀಟ ತಜ್ಞರು ಮಾಹಿತಿ ನೀಡಿದ್ದಾರೆ.