ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಬಯಸಿ ಸ್ಪರ್ಧೆ ಒಡ್ಡಿದ್ದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಅವರು ತಮ್ಮ ಮತವನ್ನು ಬೇರೆಯವರಿಗೆ ಹಾಕಿದ್ದಾರೆ. (ಈ ವರದಿ ಜೊತೆ ಪ್ರಕಟವಾಗಿದ್ದು AI ತಂತ್ರಜ್ಞಾನ ರಚಿಸಿದ ಮತದಾನದ ಸಾಂದರ್ಭಿಕ ಚಿತ್ರ) ಹೀಗಾಗಿ ಚುನಾವಣಾ ಕಣದಲ್ಲಿದ್ದ ಸತೀಶ್ ಸೈಲ್ ಅವರಿಗೆ ಒಂದು ಮತ ಸಹ ಬಿದ್ದಿಲ್ಲ.
ಐದು ವರ್ಷಗಳ ಹಿಂದೆಯೇ ಸತೀಶ್ ಸೈಲ್ ಅವರು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಆ ಅವಧಿಯಲ್ಲಿ ಸತೀಶ್ ಸೈಲ್ ಅವರಿಗೆ ಸೂಚಕರು ಸಹ ಇರಲಿಲ್ಲ. ಆ ಅವಧಿಯಲ್ಲಿ ಕಾರವಾರ ಮತಕ್ಷೇತ್ರದಿಂದ ಪ್ರಕಾಶ ಗುನಗಿ ಅವರು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದರು. ಈ ಬಾರಿ ಪ್ರಕಾಶ ಗುನಗಿ ಅವರಿಗೆ ಸೆಡ್ಡುಹೊಡೆಯುವುದಕ್ಕಾಗಿ ಮತ್ತೆ ಸತೀಶ್ ಸೈಲ್ ಅವರು ಪ್ರಯತ್ನಿಸಿದರು. ಕಳೆದ ಚುನಾವಣೆಯಲ್ಲಿ ಪ್ರಕಾಶ ಗುನಗಿ ಅವರ ಪರವಾಗಿದ್ದವರನ್ನು ಈ ಬಾರಿ ತಮ್ಮಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಅವರೇ ಸತೀಶ್ ಸೈಲ್ ಅವರಿಗೆ ನಾಮಪತ್ರ ಸಲ್ಲಿಕೆ ವೇಳೆ ಸೂಚಕರಾದರು. ಆದರೆ, ಆ ದಿನ ಸೂಚಕರಾದವರು ಮೊನ್ನೆ ನಡೆದ ಮತದಾನದ ಅವಧಿಯಲ್ಲಿ ಸತೀಶ್ ಸೈಲ್ ಅವರಿಗೆ ಮತ ಕೊಡಲಿಲ್ಲ. ಸತೀಶ್ ಸೈಲ್ ಅವರು ತಮ್ಮ ಮತವನ್ನು ತಮಗೆ ಹಾಕಲಿಲ್ಲ. ಹೀಗಾಗಿ ಕೆಡಿಸಿಸಿ ನಿರ್ದೇಶಕ ಸ್ಥಾನದ ಸ್ಪರ್ಧಿಯಾಗಿದ್ದು, ಸ್ವರ್ತ ಮತದಾರರೂ ಆಗಿದ್ದ ಸತೀಶ್ ಸೈಲ್ ಅವರಿಗೆ ಒಂದೇ ಒಂದು ಮತವೂ ಬೀಳಲಿಲ್ಲ!
ಈ ಬಾರಿಯ ಕೆಡಿಸಿಸಿ ಚುನಾವಣೆಯಲ್ಲಾದರೂ ಪ್ರಕಾಶ ಗುನಗಿ ಅವರನ್ನು ಮಣಿಸಬೇಕು ಎಂದು ಸತೀಶ್ ಸೈಲ್ ಅವರು ನಿರ್ಧರಿಸಿದ್ದರು. ಹೀಗಾಗಿ ತಮ್ಮ ನಾಮಪತ್ರ ಹಿಂಪಡೆದು ಬೇರೆ ಅಭ್ಯರ್ಥಿಗೆ ಬೆಂಬಲ ನೀಡಲು ಅವರು ಮನಸ್ಸು ಮಾಡಲಿಲ್ಲ. ಕೊನೆಕ್ಷಣದವರೆಗೂ ಕಾದುನೋಡುವ ತಂತ್ರ ಅನುಸರಿಸಿದ ಸತೀಶ್ ಸೈಲ್ ಅವರು ನಾಮಪತ್ರವನ್ನು ಹಿಂಪಡೆಯಲಿಲ್ಲ. ಪ್ರಕಾಶ ಗುನಗಿ ಅವರನ್ನು ಸೋಲಿಸುವುದಕ್ಕಾಗಿ ಪಟ್ಟುಹಿಡಿದ ಸತೀಶ್ ಸೈಲ್ ಅವರು ಕೊನೆಗೆ ತಮ್ಮ ಎದುರಾಳಿ ರೂಪಾಲಿ ನಾಯ್ಕ ಅವರ ಆಪ್ತರ ಮೊರೆಹೋದರು. ತಮ್ಮ ಮತವನ್ನು ಸಹ ಅವರು ನಂದಕಿಶೋರ್ ಅವರಿಗೆ ಹಾಕಿದರು. ರೂಪಾಲಿ ನಾಯ್ಕ ಅವರ ಆಪ್ತರಾಗಿರುವ ನಂದಕಿಶೋರ್ ಅವರು ವಿರೋಧಿ ಬಣದವರೂ ತಮಗೆ ಹಾಕಿದ ಮತವನ್ನು ತಿರಸ್ಕರಿಸಲಿಲ್ಲ. ರೂಪಾಲಿ ನಾಯ್ಕ ಅವರು ಸತೀಶ್ ಸೈಲ್ ತಮ್ಮ ಬೆಂಬಲಿಗರನ್ನು ಬೆಂಬಲಿಸಿದನ್ನು ವಿರೋಧಿಸಲಿಲ್ಲ.
ಸದ್ಯದ ಮಾಹಿತಿ ಪ್ರಕಾರ ನಂದಕಿಶೋರ ಅವರಿಗೆ 3 ಹಾಗೂ ಪ್ರಕಾಶ ಗುನಗಿ ಅವರಿಗೆ 6 ಮತ ಬಿದ್ದಿದೆ. ಸತೀಶ್ ಸೈಲ್ ಅವರಿಗೆ ಒಂದೇ ಒಂದು ಮತವೂ ಬಿದ್ದಿಲ್ಲ. ಇನ್ನೂ ನಾಲ್ಕು ಮತ ನ್ಯಾಯಾಲಯದ ಮೆಟ್ಟಿಲೇರಿದೆ. ಆ ನಾಲ್ಕು ಮತಗಳ ಪೈಕಿ ಎರಡು ಮತಗಳು ಪ್ರಕಾಶ ಗುನಗಿ ಅವರಿಗೆ ಚಲಾವಣೆಯಾಗಿರುವ ಸಾಧ್ಯತೆ ಹೆಚ್ಚಿದ್ದು, ಈ ಬಾರಿಯೂ ಕಾರವಾರ ಮತಕ್ಷೇತ್ರದಿಂದ ಪ್ರಕಾಶ ಗುನಗಿ ಅವರೇ ಕೆಡಿಸಿಸಿ ನಿರ್ದೇಶಕರಾಗಿ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿದೆ.