`ಕುಮಟಾ ತಹಶೀಲ್ದಾರ್ ಕಚೇರಿಯಲ್ಲಿ ಅನೇಕ ವರ್ಷಗಳಿಂದ ಬೀಡುಬಿಟ್ಟುರುವ ಅಧಿಕಾರಿ-ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಹೊಲನಗದ್ದೆಯ ಗಣಪತಿ ಪಟಗಾರ ಅವರ ಮುಂದಾಳತ್ವದಲ್ಲಿ ಆ ಭಾಗದ ಜನ ಸಹಿ ಸಂಗ್ರಹ ಮಾಡಿದ್ದಾರೆ. ಅದಾದ ನಂತರ ಆ ಪತ್ರವನ್ನು ಕಂದಾಯ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ.
ಕುಮಟಾದ ಹಣ್ಣೇಮಠದ ಗಣಪತಿ ಪಾಂಡು ಪಟಗಾರ ಅವರ ತಂದೆ ಹೆಸರಿನಲ್ಲಿ 3 ಗುಂಟೆ ಭೂಮಿಯಿದ್ದು, ಆ ಭೂಮಿಯ ಹಕ್ಕುದಾರರಿಗೆ ಹಂಚುವುದಕ್ಕಾಗಿ ಗಣಪತಿ ಪಟಗಾರ ಅವರು ಓಡಾಡುತ್ತಿದ್ದಾರೆ. ಇದಕ್ಕಾಗಿ ಅವರು ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಕೊಟ್ಟಿದ್ದು, ಆ ಕಡತ ತಹಶೀಲ್ದಾರ್ ಕಚೇರಿ ಸೇರಿದೆ. ಆದರೆ, ಅಲ್ಲಿಂದ ಮುಂದಿನ ಕೆಲಸ ಆಗುತ್ತಿಲ್ಲ ಎಂಬುದು ಗಣಪತಿ ಪಟಗಾರ ಅವರ ಆರೋಪ.
`ನಿಯಮಗಳ ಪ್ರಕಾರ 45 ದಿನದಲ್ಲಿ ಮುಗಿಯಬೇಕಾದ ಕೆಲಸ 5 ತಿಂಗಳು ಕಳೆದರೂ ಆಗುತ್ತಿಲ್ಲ. ತಹಶೀಲ್ದಾರರು ನಮ್ಮ ಅರ್ಜಿ ಮೂಲೆಗೆ ತಳ್ಳಿದ್ದು, ತಹಶೀಲ್ದಾರರನ್ನು ಸೇರಿ ಅನೇಕ ವರ್ಷಗಳಿಂದ ಅಲ್ಲಿ ಬೀಡುಬಿಟ್ಟಿರುವ ಅಧಿಕಾರಿ-ಸಿಬ್ಬಂದಿಯನ್ನು ವರ್ಗಾಯಿಸಬೇಕು’ ಎಂದವರು ಆಗ್ರಹಿಸಿದ್ದಾರೆ. `ಕಾಗದಪತ್ರ ಸರಿಯಾಗಿ ಆಗದ ಕಾರಣ ಜಮೀನಿನ ಮೇಲೆ ಸಾಲ ತೆಗೆಯಲು ಆಗುತ್ತಿಲ್ಲ. ಇದರಿಂದ ಮಕ್ಕಳ ಮದುವೆ-ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಿದೆ’ ಎಂದವರು ವಿವರಿಸಿದ್ದಾರೆ.
`ಕುಮಟಾ ಕಚೇರಿಯಲ್ಲಿ 22 ವರ್ಷಗಳಿಂದ ವರ್ಗಾವಣೆ ಆಗದ ನೌಕರರಿದ್ದಾರೆ. 3 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ನಿವೃತ್ತ ಅಧಿಕಾರಿ ನಾಗೇಶ ಅವರು ಹೇಳಿದ್ದಾರೆ. ಆ ಭಾಗದ ತಿಮ್ಮಣ್ಣ, ಸುನಿಲ, ರಮೇಶ್, ವೆಂಕಟ ರಮಣ ಇತರರು ಪತ್ರಕ್ಕೆ ಸಹಿ ಹಾಕಿದ್ದಾರೆ.