ಅಪಘಾತದಲ್ಲಿ ಪೆಟ್ಟು ಮಾಡಿಕೊಂಡಿದ್ದ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೆ ಆ ಆಸ್ಪತ್ರೆಯವರು ಅಲ್ಲಿ ದಾಖಲು ಮಾಡಿಕೊಂಡಿಲ್ಲ. ಅದರ ಪರಿಣಾಮ ಗಾಯಾಳು ಸರಿಯಾದ ಚಿಕಿತ್ಸೆ ಸಿಗದೇ ಸಾವನಪ್ಪಿದ್ದಾರೆ!
ವೈದ್ಯಕೀಯ ಸೇವೆಯಲ್ಲಿರುವ ಕಾವ್ಯ ಆಗೇರ್ ಅವರಿಗೆ ಮೂರು ಆಸ್ಪತ್ರೆಗೆ ಕರೆದೊಯ್ದರೂ ಸಮಯಕ್ಕೆ ಸರಿಯಾಗಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ತಮ್ಮ ತಂದೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾಗ ಅಪಘಾತದಲ್ಲಿ ಗಾಯಗೊಂಡ ಜನಸಾಮಾನ್ಯರ ಸ್ಥಿತಿ ಏನು? ಎಂಬ ಪ್ರಶ್ನೆ ಉದ್ಬವಿಸಿದ್ದು ಅದಕ್ಕೂ ಉತ್ತರವಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಸುಸಜ್ಜಿತ ಆಸ್ಪತ್ರೆಗಳಿರುವ ಮಂಗಳೂರಿಗೆ ಕರೆದೊಯ್ದರೂ ಅಲ್ಲಿನ ಆಸ್ಪತ್ರೆಯವರು ಹಾಸಿಗೆ ಇಲ್ಲದ ಕಾರಣ ಗಾಯಾಳುವನ್ನು ದಾಖಲಿಸಿಕೊಳ್ಳಲಿಲ್ಲ!
ಅಂಕೋಲಾ ಬೋಳೆಯ ಚಂದ್ರಹಾಸ ಆಗೇರ್ (50) ಅವರು ಅಕ್ಟೊಬರ್ 27ರ ಮಧ್ಯಾಹ್ನ ಶೆಟಗೇರಿ ಕ್ರಾಸಿನ ಶೆಟ್ಟಿ ಲಂಚ್ ಹೋಮ್ ಬಳಿ ನಡೆದು ಹೋಗುತ್ತಿದ್ದರು. ಕುಮಟಾದಿಂದ ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಕೆಂಪು ಕಾರು ಹೊಟೇಲ್ ಎದುರು ಹಿಮ್ಮುಖವಾಗಿ ಚಲಿಸಿತು. ನಡೆದು ಬರುತ್ತಿದ್ದ ಚಂದ್ರಹಾಸ ಆಗೇರ್ ಅವರಿಗೆ ಆ ಕಾರು ಡಿಕ್ಕಿ ಹೊಡೆಯಿತು. ಪರಿಣಾಮ ಚಂದ್ರಹಾಸ ಆಗೇರ್ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಕೆಂಪು ಕಾರಿನವರು ತಕ್ಷಣ ಅಲ್ಲಿಂದ ಕಾರುಸಹಿತ ಪರಾರಿಯಾದರು.
ಅಪಘಾತದಿಂದಾಗಿ ತಲೆ ಹಾಗೂ ಕಾಲಿಗೆ ಪೆಟ್ಟಾಗಿದ್ದ ಅವರನ್ನು ಮೊದಲು ಅಂಕೋಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ತರಲಾಯಿತು. ಅದಾದ ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಕಾರವಾರದಿಂದ ಮಂಗಳೂರಿಗೆ ರೋಗಿ ಕರೆದೊಯ್ದರೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯವರು ಚಂದ್ರಹಾಸ ಆಗೇರ್ ಅವರನ್ನು ದಾಖಲಿಸಿಕೊಳ್ಳಲಿಲ್ಲ. `ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆ ಭರ್ತಿಯಾಗಿದ್ದು, ಚಿಕಿತ್ಸೆ ನೀಡಲು ಸ್ಥಳಾವಕಾಶವಿಲ್ಲ’ ಎಂಬ ಕಾರಣ ನೀಡಿ ಚಂದ್ರಹಾಸ ಆಗೇರ್ ಅವರನ್ನು ಕಾರವಾರಕ್ಕೆ ಮರಳಿ ಕಳುಹಿಸಿದರು.
ಆದರೆ, ಈಗಾಗಲೇ ಮೂರು ಆಸ್ಪತ್ರೆ ಸುತ್ತಿದ್ದ ಚಂದ್ರಹಾಸ ಆಗೇರ್ ಅವರನ್ನು ನರ್ಸ ಆಗಿರುವ ಅವರ ಪುತ್ರಿ ಕಾವ್ಯ ಆಗೇರ್ ಅವರು ಮರಳಿ ಕಾರವಾರಕ್ಕೆ ಕರೆತರುವ ಪ್ರಯತ್ನ ಮಾಡಿದರು. ಆದರೆ, ಚಂದ್ರಹಾಸ ಆಗೇರ್ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ಕಾರವಾರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಚಂದ್ರಹಾಸ ಆಗೇರ್ ಅವರ ಶವವಿರಿಸಲಾಗಿದ್ದು, ಅಪರಿಚಿತ ಕಾರು ಹಾಗೂ ಚಾಲಕನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕಾವ್ಯ ಆಗೇರ್ ಅವರು ಪ್ರಕರಣ ದಾಖಲಿಸಿದರು. ಅದಾದ ನಂತರ ಶವಪಡೆದು ಅಂತ್ಯ ಸಂಸ್ಕಾರದ ಕಾರ್ಯ ನಡೆಸಿದರು.