ಭಟ್ಕಳದಲ್ಲಿ ಮೂರು ವರ್ಷದ ಮಗು ಬಿಸಿ ನೀರಿನ ಬಕೇಟಿಗೆ ಬಿದ್ದಿದೆ. ಆ ಮಗುವನ್ನು ಲೈಫ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ ಎಂದು ಪಾಲಕರು ದೂರಿದ್ದಾರೆ. ಈ ಆರೋಪ ಮಾಡಿದ ಪಾಲಕರ ವಿರುದ್ಧ ಆಸ್ಪತ್ರೆಯವರು ಪೊಲೀಸ್ ದೂರು ನೀಡಿದ್ದಾರೆ!
ಅಕ್ಟೊಬರ್ 20ರಂದು ಜಾಲಿ ರಸ್ತೆಯಲ್ಲಿರುವ ಲೈಫ್ ಕೇರ್ ಆಸ್ಪತ್ರೆಯ ತುರ್ತು ಘಟಕಕ್ಕೆ ಕೆಲವರು ಮಗುವೊಂದನ್ನು ಕರೆತಂದಿದ್ದರು. ಹನಿಪಾಬಾದಿನ ಆರ್ಸಿಲಿನ್ ಆಸಿಪ್ ಶೇಖ್ ಎಂಬ ಮಗು ಬಿಸಿ ನೀರಿನ ಬಕೇಟಿಗೆ ಬಿದ್ದು ಗಾಯಗೊಂಡಿತ್ತು. ಸುಟ್ಟ ಗಾಯ ನೋಡಿದ ಆಸ್ಪತ್ರೆಯವರು ತಕ್ಷಣ ಆ ಮಗುವನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿದ್ದರು. ಎರಡು ದಿನಗಳ ಕಾಲ ಮಗುವಿನ ಆರೈಕೆ ಮಾಡಿದ್ದರು.
ಆದರೆ, ಆಸ್ಪತ್ರೆಯವರು ಆರೈಕೆ ಮಾಡಿದ ವಿಧಾನ ಮಗುವಿನ ಪೋಷಕರಿಗೆ ಹಿಡಿಸಲಿಲ್ಲ. ಹೀಗಾಗಿ ಆ ಮಗುವಿನ ಅಜ್ಜ ಭಟ್ಕಳದ ಭಾಷಾ ಶೇಖ್ ಅವರು ಆಸ್ಪತ್ರೆ ವೈದ್ಯರ ವಿರುದ್ಧ ಕೂಗಾಡಿದರು. ಅಲ್ಲಿನ ಸಿಬ್ಬಂದಿ ಹಾಗೂ ವೈದ್ಯರನ್ನು ನಿಂದಿಸಿ ಬೆದರಿಕೆ ಒಡ್ಡಿದ್ದರು. ಅದಾದ ನಂತರ ಅಕ್ಟೊಬರ್ 26ರಂದು ಭಟ್ಕಳಿಗರ ಕ್ರಿಕೆಟ್ ಗ್ರೂಪ್ ಎಂಬ ವಾಟ್ಸಪ್ ಗುಂಪಿನಲ್ಲಿ ಆಸ್ಪತ್ರೆಯ ಬಗ್ಗೆ ಕೆಟ್ಟ ವಿಡಿಯೋ ಹರಿದಾಡಿದವು. ಆ ವಿಡಿಯೋದಲ್ಲಿLife care Hospital is the wrost in our Bhatkal Town ಎಂಬ ಬರಹಗಳಿದ್ದವು.
ಆ ವಿಡಿಯೋ ನೋಡಿದ ಲೈಫ್‌ಕೇರ್ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಲ್ಮಾನ್ ಅಹ್ಮದ್ ಅವರು ಕಾನೂನು ಕ್ರಮಕ್ಕೆ ಮುಂದಾದರು. ಆಸ್ಪತ್ರೆ ಹೆಸರು ಕೆಡಿಸಿದ ಭಾಷಾ ಶೇಖ್ ಅವರ ವಿರುದ್ಧ ಪೊಲೀಸ್ ದೂರು ನೀಡಿದರು. ಪೊಲೀಸರು ಪ್ರಕರಣ ವಿಚಾರಣೆ ನಡೆಸಿ ಹಿಂಬರಹ ನೀಡಿದ್ದು, ಅದಕ್ಕೆ ಸಮಾಧಾನವಾಗದ ಸಲ್ಮಾನ್ ಅಹ್ಮದ್ ಅವರು ನ್ಯಾಯಾಲಯದ ಮೆಟ್ಟಿಲೇರಿದರು. ಭಾಷಾ ಶೇಖ್ ಅವರ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪೊಲೀಸ್ ಪ್ರಕರಣವನ್ನು ದಾಖಲಿಸಿದರು.