ಸಾಲಗಾರರೊಬ್ಬರಿಗೆ 70 ಸಾವಿರದ ಚೆಕ್ ನೀಡಿ ಓಡಿ ಓಡಿ ಹೋಗಿದ್ದ ಶಿರಸಿಯ ರವೀಂದ್ರ ಹೆಗಡೆ ಗುರುವಾರ ಸಿಕ್ಕಿಬಿದ್ದಿದ್ದಾರೆ. ಚೆಕ್ ಬೌನ್ಸ ಕೇಸ್ ಆಗಿದ್ದರೂ ಕೋರ್ಟಿಗೆ ಹಾಜರಾಗದ ಅವರನ್ನು ಪೊಲೀಸರು ಹಿಡಿದಿದ್ದಾರೆ.
ಶಿರಸಿಯ ರವೀಂದ್ರ ಗಣಪತಿ ಹೆಗಡೆ ಅವರು ಊರತುಂಬ ಸಾಲ ಮಾಡಿಕೊಂಡಿದ್ದರು. 2002ರಲ್ಲಿ ಸಾಲಗಾರರು ಕಾಡಿಸಿದಾಗ ವ್ಯಕ್ತಿಯೊಬ್ಬರಿಗೆ 70 ಸಾವಿರದ ಚೆಕ್ ನೀಡಿದ್ದರು. ಅದಾದ ನಂತರ ರವೀಂದ್ರ ಹೆಗಡೆ ಅವರು ಶಿರಸಿ ಬಿಟ್ಟು ಪರಾರಿಯಾಗಿದ್ದರು. ಮಂಗಳೂರಿಗೆ ಹೋಗಿದ್ದ ಅವರು ಅಲ್ಲಿ ಬೇರೆ ಬೇರೆ ಹೆಸರಿನಲ್ಲಿ ಬದುಕು ಕಟ್ಟಿಕೊಂಡಿದ್ದರು.
ಚೆಕ್‌ಪಡೆದ ವ್ಯಕ್ತಿ ಅದನ್ನು ಬ್ಯಾಂಕಿಗೆ ಹಾಕಿದಾಗ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿರುವುದು ಗೊತ್ತಾಯಿತು. ಆದರೆ, ಚೆಕ್ ಕೊಟ್ಟಿದ್ದ ರವೀಂದ್ರ ಹೆಗಡೆ ಸಂಪರ್ಕಕ್ಕೆ ಸಿಗಲಿಲ್ಲ. ಸ್ಥಳೀಯವಾಗಿಯೂ ಅವರು ಯಾರ ಕಣ್ಣಿಗೂ ಕಾಣಿಸಿಕೊಳ್ಳಲಿಲ್ಲ. ಅದಾಗಿಯೂ ಚೆಕ್ ಅಮಾನ್ಯವಾದ ಬಗ್ಗೆ ಹಣ ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಿಂದ ವಾರೆಂಟ್ ಆದರೂ ರವೀಂದ್ರ ಹೆಗಡೆ ಅವರು ಕೋರ್ಟಿಗೆ ಹಾಜರಾಗಿರಲಿಲ್ಲ.
ಊರು ಬಿಟ್ಟು ಹೋಗಿದ್ದ ರವೀಂದ್ರ ಹೆಗಡೆ ಅವರು ಶಿರಸಿ ಕಡೆ ತಲೆ ಹಾಕುತ್ತಿರಲಿಲ್ಲ. ಅವರು ಎಲ್ಲಿದ್ದರು? ಎಂಬುದು ಬಹುತೇಕರಿಗೆ ಅರಿವಿರಲಿಲ್ಲ. ಹೀಗಿರುವಾಗ ಪೊಲೀಸರು ಉಪಾಯವಾಗಿ ಅವರ ಹುಡುಕಾಟ ನಡೆಸಿದರು. ರವೀಂದ್ರ ಹೆಗಡೆ ಅವರೇ ಶಿರಸಿಗೆ ಬರುವ ಹಾಗೇ ಮಾಡಿದರು. ಶಿರಸಿ ಪ್ರವೇಶಿಸಿದ ಕೂಡಲೇ ರವೀಂದ್ರ ಹೆಗಡೆ ಅವರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು.
ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗು ಸಿಪಿಐ ಶಶಿಕಾಂತ್ ವರ್ಮಾ ಜೊತೆ ಮಾರುಕಟ್ಟೆ ಠಾಣೆಯ ಪಿಎಸ್‌ಐ ಬಸವರಾಜ್ ಕನಶೆಟ್ಟಿ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ವಿಶ್ವನಾಥ್ ಭಂಡಾರಿ, ಪ್ರದೀಪ್ ನಾಯಕ್, ಅಶೋಕ್ ಹರಿಕಂತ್ರ, ರಮೇಶ್ ಮುಚ್ಚಂಡಿ ಸೇರಿ ಆರೋಪಿಯನ್ನು ಹಿಡಿದರು.