ಶಿರಸಿಯ ಸಂಪತಕುಮಾರ ರಾವ್ ಅವರಿಗೆ ಫೇಸ್ಬುಕ್ ಮೂಲಕ ಪರಿಚಯವಾದ ಮೀನಾಕ್ಷಿ ಎಂಬಾತರು ಮಾತಿನಲ್ಲಿಯೇ ಮರಳು ಮಾಡಿ ಕೋಟ್ಯಂತರ ರೂ ಯಾಮಾರಿಸಿದ್ದಾರೆ. ಅವರ ಮಾತಿನ ಮೋಡಿಗೆ ಒಳಗಾದ ಸಂಪತಕುಮಾರ ಅವರು ತಮ್ಮ ಸಂಪತ್ತು ಕಳೆದುಕೊಂಡಿದ್ದಾರೆ!
ಶಿರಸಿಯ ನಿಲೇಕಣಿ ಬಳಿಯ ಸ್ಕಂದ ಶಿರಸಿಕರ್ ಎಕ್ಸಟೆಂಶನ್ ಬಳಿ ಸಂಪತಕುಮಾರ ಮುಕುಂದ ರಾವ್ (54) ಅವರು ವಾಸವಾಗಿದ್ದಾರೆ. 2025ರ ಸೆಪ್ಟೆಂಬರ್ 29ರಂದು ಅವರು ಫೇಸ್ಬುಕ್ ನೋಡುವಾಗ ಅಲ್ಲಿ ನಕಲಿ ಜಾಹೀರಾತೊದು ಅವರ ಗಮನಸೆಳೆದಿದೆ. `ವೆಲ್ತ ಗ್ರೌಥ್’ ಎಂಬ ಜಾಹೀರಾತು ನೋಡಿದ ಅವರು `ಟ್ರೇಡಿಂಗ್ ಮೂಲಕ ಹೆಚ್ಚಿನ ಹಣಗಳಿಸಲು ಸಾಧ್ಯ’ ಎಂದು ನಂಬಿದ್ದಾರೆ. ಆ ಜಾಹೀರಾತು ನಂಬಿ ಅವರು ವಾಟ್ಸಪ್ ಗುಂಪಿಗೆ ಪ್ರವೇಶಪಡೆದಿದ್ದು, ಅಲ್ಲಿ ಅವರಿಗೆ ಮೀನಾಕ್ಷಿ ಅವರ ಪರಿಚಯವಾಗಿದೆ.
ವಾಟ್ಸಪ್ ಕಾಲ್ ಮಾಡುವ ಮೀನಾಕ್ಷಿ ಅವರು ಸಂಪತಕುಮಾರ ಅವರನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ತೀರಾ ಆಪ್ತರಂತೆ ಮಾತನಾಡಿ ಟ್ರೇಡಿಂಗ್ ಕುರಿತು ಮಾಹಿತಿ ನೀಡಿದ್ದಾರೆ. ಅದಾದ ನಂತರ ಸಂಪತಕುಮಾರ ಅವರಿಗೆ ಮೊಬೈಲ್ ಅಪ್ಲಿಕೇಶನ್ ಒಂದನ್ನು ತೆರೆಯಲು ಸೂಚನೆ ನೀಡಿದ್ದಾರೆ. ಆ ಅಪ್ಲಿಕೇಶನ್ ಮೂಲಕವೇ ಹೂಡಿಕೆ ಮಾಡುವಂತೆ ಮನವೊಲೈಸಿದ್ದಾರೆ.
ಮೀನಾಕ್ಷಿ ಅವರ ಮಾತು ನಂಬಿದ ಸಂಪತಕುಮಾರ ಅವರು ವಿವಿಧ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಮೀನಾಕ್ಷಿ ಅವರು ಹೇಳಿದ ಕಡೆ ಹೂಡಿಕೆ ಮಾಡಿದ್ದಾರೆ. ಸೆಪ್ಟೆಂಬರ್ 29ರಿಂದ ಅಕ್ಟೊಬರ್ 30ರವರೆಗೆ ಒಟ್ಟು 22905376ರೂ ಹಣ ಹೂಡಿಕೆ ಮಾಡಿದ್ದು, ಇದಕ್ಕೆ 107180310ರೂ ಲಾಭ ಬಂದಿರುವುದಾಗಿ ಮೀನಾಕ್ಷಿ ಅವರು ನಂಬಿಸಿದ್ದಾರೆ. ಆ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಮಾತ್ರ ಅದು ಸಾಧ್ಯವಾಗಿಲ್ಲ!
ಮತ್ತೆ ಫೋನ್ ಮಾಡಿ ವಿಚಾರಿಸಿದಾಗ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಮೀನಾಕ್ಷಿ ಅವರು ಸಂಪತಕುಮಾರ ಅವರಿಗೆ ಸೂಚನೆ ನೀಡಿದ್ದಾರೆ. ಆಗ, ಸಂಪತಕುಮಾರ ಅವರಿಗೆ ಅನುಮಾನ ಶುರುವಾಗಿದೆ. ಅದಾದ ನಂತರ ಇನ್ನಷ್ಟು ಆಳಕ್ಕೆ ವಿಚಾರ ಮಾಡಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಹೀಗಾಗಿ ಕಾರವಾರಕ್ಕೆ ಓಡಿದ ಅವರು ಅಲ್ಲಿನ ಸೈಬರ್ ಠಾಣೆ ಪೊಲೀಸರನ್ನು ಭೇಟಿ ಮಾಡಿದ್ದಾರೆ. ತಮಗಾದ ಕೆಟ್ಟ ಅನುಭವದ ಬಗ್ಗೆ ಅವರು ದೂರು ನೀಡಿದ್ದು, ಮೋಸ ಮಾಡಿ ದುಡ್ಡು ಹೊಡೆದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.