ವಿದ್ಯುತ್ ಬಿಲ್ ಬಾಕಿ ಹಿನ್ನಲೆ ಕಾರವಾರದ ಹಲವು ಸರ್ಕಾರಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಬಿಲ್ ಪಾವತಿ ಮಾಡುವವರೆಗೂ ವಿದ್ಯುತ್ ಸಂಪರ್ಕ ಮರುಜೋಡಣೆ ಮಾಡದಿರಲು ಹೆಸ್ಕಾಂ ನಿರ್ಧರಿಸಿದೆ.
ಸಾಕಷ್ಟು ಬಾರಿ ತಿಳುವಳಿಕೆ ನೀಡಿದರೂ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿ ಮಾಡುತ್ತಿಲ್ಲ. ಈ ಹಿನ್ನಲೆ ಹೆಸ್ಕಾಂ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ವಿದ್ಯುತ್ ಬಿಲ್ ಕಟ್ಟದ ಕಾರವಾರದ ಸರ್ಕಾರಿ ಕಚೇರಿಗಳ 15 ಕ್ಕೂ ಹೆಚ್ಚು ಮೀಟರ್‌ಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇದರಿಂದ ಸರ್ಕಾರಿ ಕಚೇರಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೇ ಜನ ಸಮಸ್ಯೆ ಅನುಭವಿಸಿದ್ದಾರೆ. ವಿದ್ಯುತ್ ಇಲ್ಲದ ಕಾರಣ ಸರ್ಕಾರಿ ಕೆಲಸಕ್ಕೆ ಸಹ ಅಡಚಣೆಯಾಗಿದೆ.
ಕಾರವಾರ ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಶಾಸಕರ ಕಚೇರಿ ಹಾಗೂ ಜಿಲ್ಲಾ ನೋಂದಾಣಾಕಾರಿ ಕಚೇರಿಯ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಿಲ್ ಬಾಕಿಯಿದೆ. 9 ತಿಂಗಳಿನಿAದ ಸರ್ಕಾರಿ ಕಚೇರಿಯವರು ಬಿಲ್ ಪಾವತಿ ಮಾಡದ ಕಾರಣ ಹೆಸ್ಕಾಂ ಕಾನೂನು ಕ್ರಮ ಜರುಗಿಸಿದೆ. ಕೆಲ ಕಚೇರಿಯಲ್ಲಿ ಬ್ಯಾಟರಿ ಇದ್ದು, ಕೆಲ ಕಾಲ ಆ ಆಧಾರದಲ್ಲಿ ಕೆಲಸ ನಡೆದಿದೆ. ಅದಾದ ನಂತರ ಕಚೇರಿ ಕೆಲಸಗಳು ಸ್ಥಬ್ದವಾಗಿದೆ. ಸರ್ಕಾರಿ ಕೆಲಸಕ್ಕೆ ಬಂದ ಜನ ಅವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.