ಸೊಪ್ಪಿನ ಬೆಟ್ಟದ ವಿಷಯಕ್ಕಾಗಿ ಸಿದ್ದಾಪುರದ ಸೋವಿನಕೊಪ್ಪದ ಸುಧಾ ಹೆಗಡೆ ಹಾಗೂ ಸರೋಜಾ ಹೆಗಡೆ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟಕ್ಕೆ ನಾರಾಯಣ ಹೆಗಡೆ ಅವರು ಕೈ ಜೋಡಿಸಿದ್ದಾರೆ.
ಸಿದ್ದಾಪುರದ ಸೋವಿನಕೊಪ್ಪದ ಸುಧಾ ವಿಶ್ವನಾಥ ಹೆಗಡೆ ಅವರಿಗೆ ಅದೇ ಊರಿನ ಸರೋಜಾ ನಾರಾಯಣ ಹೆಗಡೆ ಅವರು ಸಣ್ಣದಾದ ಕೋಲಿನಿಂದ ಹೊಡೆದಿದ್ದಾರೆ. ಕೋಲಿನಿಂದ ಹೊಡೆದ ಉರಿ ತಡೆಯಲಾರದೇ ಸುಧಾ ಹೆಗಡೆ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನಾರಾಯಣ ಹೆಗಡೆ ಹಾಗೂ ಸರೋಜಾ ಹೆಗಡೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅಕ್ಟೊಬರ್ 31ರಂದು ರಾತ್ರಿ 8ಗಂಟೆಗೆ ಸುಧಾ ಹೆಗಡೆ ಹಾಗೂ ಸರೋಜಾ ಹೆಗಡೆ ಅವರ ನಡುವೆ ಈ ಗಲಾಟೆ ನಡೆದಿದೆ. ಸೋವಿನಕೊಪ್ಪ ಸರ್ವೇ ನಂ 6ರಲ್ಲಿನ ಭೂಮಿ ವಿಷಯದಲ್ಲಿನ ತಕರಾರು ಈ ಹೊಡೆದಾಟಕ್ಕೆ ಮೂಲ ಕಾರಣ. ಹೊಡೆದಾಟ ನಡೆಸಿದವರೆಲ್ಲರೂ ದಾಯಾದಿಗಳೇ ಆಗಿದ್ದು, ಕುಟುಂಬದ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ.
ಶುಕ್ರವಾರ ವಿವಾದಿತ ಭೂಮಿಯಲ್ಲಿ ಸರೋಜಾ ಹೆಗಡೆ ಅವರು ದನಕರ ಮೇಯಿಸುತ್ತಿದ್ದರು. ಇದನ್ನು ಸುಧಾ ಹೆಗಡೆ ಅವರು ಸಹಿಸಲಿಲ್ಲ. ದನಕರು ಬಿಟ್ಟಿರುವ ಬಗ್ಗೆ ಪ್ರಶ್ನಿಸಿದ ಕಾರಣ ಸರೋಜಾ ಹೆಗಡೆ ಅವರು ಸುಧಾ ಹೆಗಡೆ ಅವರಿಗೆ ಸಣ್ಣ ಕೋಲಿನಿಂದ ಹೊಡೆದರು. ನಾರಾಯಣ ಹೆಗಡೆ ಅವರು ಈ ವೇಳೆ ಸುಧಾ ಹೆಗಡೆ ಅವರಿಗೆ ಬೈದರು. `ಈ ಜಾಗ ನಮ್ಮದು’ ಎಂದು ನಾರಾಯಣ ಹೆಗಡೆ ಅಬ್ಬರಿಸಿದರು. ಹೀಗಾಗಿ ಸುಧಾ ಹೆಗಡೆ ಅವರು ಪೊಲೀಸ್ ದೂರು ನೀಡಿದರು.