ಶಿರಸಿ TSS ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ವಿನಾಯಕ ಹೆಗಡೆ ಅವರು ಆ ಸಂಸ್ಥೆ ತೊರೆದ ನಂತರ ಧಾರವಾಡದಲ್ಲಿ ವಿಶೇಷ ತರಬೇತಿಪಡೆದಿದ್ದು, ಇದೀಗ ಊರಿನಲ್ಲಿಯೇ ಸ್ವ ಉದ್ಯೋಗ ಮಾಡುತ್ತಿದ್ದಾರೆ. ಅಡಿಕೆ ಸಿಪ್ಪೆ, ಅಡಿಕೆ ದಬ್ಬೆ, ಅಡಿಕೆ ಹಾಳೆಗಳನ್ನು ಪುಡಿ ಮಾಡಿ ಅವರು ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಅಡಿಕೆ ಮೌಲ್ಯ ವರ್ಧನೆಯ ಬಗ್ಗೆ ಬಹುತೇಕರು ಮಾತನಾಡುತ್ತಾರೆ. ಕಚ್ಚಾ ವಸ್ತುಗಳಿಂದ ಸಿದ್ಧ ವಸ್ತುಗಳನ್ನು ಸಿದ್ಧಪಡಿಸುವ ಬಗ್ಗೆ ನೂರಾರು ಯೋಜನೆಗಳನ್ನು ಹೇಳುತ್ತಾರೆ. ಅಂಥವರಿಗೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ನವ ಉದ್ಯಮಗಳಿಗೆ ಪ್ರೋತ್ಸಾಹಿಸುವ ಕೃಷಿಕ್ ವಿಭಾಗ ಆಹ್ವಾನ ನೀಡುತ್ತಿದ್ದು, ಹೆಗಡೆಕಟ್ಟಾದ ವಿನಾಯಕ ಹೆಗಡೆ ಅವರು ಅಲ್ಲಿಗೆ ಹೋಗಿ ತಮ್ಮ ಆಸಕ್ತಿಯನ್ನು ಪ್ರಸ್ತುತಪಡಿಸಿದ್ದಾರೆ. ಅದರ ಪರಿಣಾಮವಾಗಿ ಕೃಷಿ ನಿರುಪಯೋಗಿ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ಸಿದ್ಧಪಡಿಸುವ ಘಟಕ ತಯಾರಿಸಿದ್ದಾರೆ. ವಿನಾಯಕ ಹೆಗಡೆ ಅವರ ಈ ಸಾಹಸಕ್ಕೆ ಅವರ ಪತ್ನಿ ಜಯಶ್ರೀ ಹೆಗಡೆ ಅವರು ಕೈ ಜೋಡಿಸಿದ್ದಾರೆ. ಈ ದಂಪತಿಯ ನಿರಂತರ ಪ್ರಯತ್ನದಿಂದ ನೂರಾರು ಬಗೆಯ ಕಲಾಕೃತಿಗಳು ಜನ್ಮ ತಾಳಿದ್ದು, ಅವು ಜನರ ಮನ ಗೆದ್ದಿವೆ. ಬರೇ ನಾಲ್ಕು ತಿಂಗಳಿನಲ್ಲಿ ಇಲ್ಲಿನ ಕಲಾಕೃತಿಗಳು ಜಿಲ್ಲೆ ದಾಟಿ ಸಾಗರ ಸೇರಿವೆ.
ವಿನಾಯಕ ಹೆಗಡೆ ಅವರಿಗೆ 4 ಎಕರೆ ಅಡಿಕೆ ತೋಟವಿದೆ. ತೋಟದಲ್ಲಿ ಸಾವನಪ್ಪಿದ ಅಡಿಕೆ ಮರ, ಅಡಿಕೆ ಸಿಪ್ಪೆ, ಅಡಿಕೆ ಒಡಕುಗಳನ್ನು ಅವರು ಆರಿಸುತ್ತಾರೆ. ಕಡಿಮೆ ಬಿದ್ದರೆ ಬೇರೆ ಬೇರೆ ಭಾಗದಿಂದ ಕಚ್ಚಾ ವಸ್ತುಗಳನ್ನು ತರಿಸಿ ಅದಕ್ಕೆ ಅಂದದ ರೂಪ ಕೊಡುತ್ತಾರೆ. ಅಡಿಕೆ ಮರದ ಉತ್ಪನ್ನಗಳನ್ನು ಪುಡಿ ಮಾಡಿ ಅದಕ್ಕೆ ಅಗತ್ಯವಿರುವ ಇನ್ನಷ್ಟು ವಸ್ತುಗಳನ್ನು ಸೇರಿಸಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಮದುವೆ-ಮುಂಜಿಗಳಿಗೆ ಉಡುಗರೆ ನೀಡುವುದರ ಜೊತೆ ಮನೆ ಅಲಂಕಾರಕ್ಕೆ ಈ ವಸ್ತುಗಳು ಶೋಭೆ ತಂದು ಕೊಡುತ್ತಿವೆ.
ಸದ್ಯ ಅವರ ಬಳಿ ಎಂಟು ಜನ ನುರಿತ ಕೆಲಸಗಾರರಿದ್ದು, ಯಾರಿಗೆ ಯಾವುದೇ ರೀತಿಯಾದ ಕಲಾಕೃತಿ ಬೇಕಾದರೂ ವಿನಾಯಕ ಹೆಗಡೆ ದಂಪತಿ ಸಿದ್ಧಪಡಿಸಿಕೊಡುತ್ತಾರೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ಸಹ ಈ ದಂಪತಿ ರಚಿಸಿದ ಕಲಾಕೃತಿಗಳು ಸಿಗುತ್ತದೆ. 14*10ರ ಇಂಚ್ ಗಾತ್ರದ ಕಲಾಕೃತಿಗಳಿಗೆ 480ರೂ ಹಾಗೂ 8 ಇಂಚಿನ ವೃತ್ತಾಕಾರದ ಕಲಾಕೃತಿಗೆ 160ರೂ ದರದಲ್ಲಿ ಅವರು ಮಾರಾಟ ಮಾಡುತ್ತಾರೆ. ಸರಿಸುಮಾರು 1 ಕೆಜಿ ತೂಕವಿರುವ ಇವು ಮರದಿಂದ ಮಾಡಿದ ಕಲಾಕೃತಿಯ ಅನುಭವ ನೀಡುತ್ತದೆ. ಭವಿಷ್ಯದಲ್ಲಿ ವಿವಿಧ ಹೋಟೆಲ್-ಹೋಂ ಸ್ಟೇ ಬರುವ ಪ್ರವಾಸಿಗರಿಗೂ ಈ ಕಲಾಕೃತಿಗಳನ್ನು ತಲುಪಿಸುವ ಯೋಜನೆ ಅವರಿಗಿದೆ.
ವಿನಾಯಕ ಹೆಗಡೆ ಅವರ ಜೊತೆ ಮಾತನಾಡಲು ಇಲ್ಲಿ ಫೋನ್ ಮಾಡಿ: 9986285763