ಅರ್ಹತೆ ಆಧಾರದ ಮೇಲೆ ಕೆಲಸಪಡೆಯಬೇಕಿದ್ದ ಯಲ್ಲಾಪುರದ ಏಳು ಜನ ಲಂಚ ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಅವರಿಗೆ ಇದೀಗ ಅನ್ಯಾಯವಾಗಿದೆ. ಸರ್ಕಾರಿ ಕೆಲಸಪಡೆಯುವ ತರಾತುರಿಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿದವರಿಗೆ ಕೆಲಸವೂ ಸಿಕ್ಕಿಲ್ಲ. ಕಾಸು ಮರಳಿ ಬಂದಿಲ್ಲ!
ಮೋಸ ಹೋದ ಎಲ್ಲರೂ 30 ವರ್ಷ ಒಳಗಿನವರಾಗಿದ್ದಾರೆ. ಆರು ಜನ ನಿರುದ್ಯೋಗಿ ಯುವಕರ ಜೊತೆ ಈಗಾಗಲೇ ಒಳ್ಳೆಯ ಉದ್ಯೋಗದಲ್ಲಿದ್ದ ಯುವತಿಯೊಬ್ಬರು ಈ ಮೋಸದ ಜಾಲಕ್ಕೆ ಸಿಲುಕಿದ್ದಾರೆ. ಸಾಕಷ್ಟು ಓದಿಕೊಂಡಿದ್ದ ವಿದ್ಯಾವಂತರೇ ಮೋಸ ಹೋಗಿರುವುದನ್ನು ನೋಡಿ ಜನರು ಪಶ್ಚಾತಾಪಪಡುತ್ತಿದ್ದಾರೆ.
ಯಲ್ಲಾಪುರದ ಕಳಚೆಯ ಶ್ರೀನಾಥ ಶ್ರೀಕಾಂತ ಕಳಸ ಅವರು ಮೋಸದ ಬಲೆಗೆ ಬಿದ್ದಿದ್ದಾರೆ. ಅವರ ಜೊತೆ ಮಾವಿನಮನೆ ಗೋಗದ್ದೆಯ ಗೌರೀಶ ಮೋಹನ ಮರಾಠಾ, ಕಳಚೆಯ ರವಿ ತಮ್ಮಣ್ಣ ಗೌಡ, ಅರಬೈಲ್ ಹೆಗ್ಗಾರಗದ್ದೆಯ ಗಜಾನನ ಈಶ್ವರ ಪಟಗಾರ, ಕಳಚೆಯ ಪ್ರಭಾಕರ ವಿಶ್ವೇಶ್ವರ ಗೌಡ, ವಜ್ರಳ್ಳಿಯ ರಾಮಚಂದ್ರ ರಾಧಾಕೃಷ್ಣ ಕೋಡಕಣಿಕರ್ ಸಹ ಸರ್ಕಾರಿ ಕೆಲಸಕ್ಕಾಗಿ ಕಾಸು ಕೊಟ್ಟು ಕೆಟ್ಟಿದ್ದಾರೆ. ಈಗಾಗಲೇ ಖಾಸಗಿ ಉದ್ಯೋಗಿಯಾಗಿರುವ ಕಳಚೆ ಬಳಿಯ ತಳಕೆಬೈಲಿನ ಶ್ವೇತಾ ಸುಭಾಶ ಮರಾಠಿ ಅವರು ಸಹ ಸರ್ಕಾರಿ ಕೆಲಸದ ಆಸೆಗೆ ಬಿದ್ದು ವಂಚನೆಗೆ ಒಳಗಾಗಿದ್ದಾರೆ.
ರಾಯಚೂರಿನ ಕೆಂಚಪ್ಪ ಹಂಚಿನಾಳ ಎಂಬಾತರು ಜಲ ಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಈ ಎಲ್ಲರನ್ನು ಯಾಮಾರಿಸಿದ್ದಾರೆ. 2024ರ ಮಾರ್ಚ ತಿಂಗಳಿನಿoದ 2025ರ ಮಾರ್ಚ 28ರವರೆಗೆ ಈ ಎಲ್ಲರಿಂದಲೂ ಹಣಪಡೆದ ಕೆಂಚಪ್ಪ ಹಂಚಿನಾಳ ಇದೀಗ ಕೆಲಸ ಕೊಡಿಸದೇ ಕೈ ಎತ್ತಿದ್ದಾರೆ. ಕೆಂಚಪ್ಪ ಹಂಚಿನಾಳ ಅವರು ಪ್ರಕರಣದ ಸಾಕ್ಷಿದಾರ ಗೌರೀಶ ಅವರಿಂದ 3.85 ಲಕ್ಷ ರೂ ಹಾಗೂ ಉಳಿದವರಿಂದ 4.85 ಲಕ್ಷ ರೂ ಹಣಪಡೆದು ಮೋಸ ಮಾಡಿದ್ದಾರೆ.
ಮೋಸ ಹೋದವರೆಲ್ಲರೂ ಸೇರಿ ಅವರ ಪಾಲಕರ ಬಳಿ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಕೊನೆಗೆ ಬೇರೆ ದಾರಿ ಇಲ್ಲದೇ ಪೊಲೀಸರ ಮೊರೆ ಹೋಗಿದ್ದಾರೆ. ಯಲ್ಲಾಪುರ ಪೊಲೀಸರು ವಿವರ ಕೇಳಿದ್ದು, `ಸರ್ಕಾರಿ ಕೆಲಸ ಮಾರಾಟಕ್ಕೆ ಇಲ್ಲ’ ಎಂದು ಅವರಿಗೆಲ್ಲರಿಗೂ ಮನವರಿಕೆ ಮಾಡಿದ್ದಾರೆ. ಅದಾದ ನಂತರ ರಾಯಚೂರಿನ ಕೆಂಚಪ್ಪ ಹಂಚಿನಾಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಎಎಸ್ಐ ರೇಣುಕಾ ಬೆಳಗಟ್ಟಿ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.