ಮುರುಡೇಶ್ವರದ ಆರ್ ಎನ್ ಎಸ್ ಡಿಪ್ಲೋಮಾ ಕಾಲೇಜಿನ ಉದ್ಯೋಗಿ ಅರುಣಕುಮಾರ ಅವರು ಮಂಗಳಮುಖಿಯರ ಸಹವಾಸಕ್ಕೆ ಬಿದ್ದು ಚಿನ್ನದ ಸರ ಕಳೆದುಕೊಂಡಿದ್ದಾರೆ. ದುಡ್ಡಿಲ್ಲದೇ ಸೇವೆಪಡೆದ ಕಾರಣ ಮಂಗಳಮುಖಿಯೊಬ್ಬರು ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ!
ಮಾವಳ್ಳಿ-2ರ ಗುಮ್ಮನಕ್ಕಲ್ ಜಡೆಯನಮನೆಯ ಅರುಣಕುಮಾರ ಭಾಸ್ಕರ ನಾಯ್ಕ (32) ಅವರು ಆರ್ ಎನ್ ಎಸ್ ಡಿಪ್ಲೋಮಾ ಕಾಲೇಜಿನಲ್ಲಿ ಲ್ಯಾಬ್ ಇನ್ ಚಾರ್ಜ ಆಗಿ ಕೆಲಸ ಮಾಡುತ್ತಾರೆ. ನವೆಂಬರ್ 2ರ ರಾತ್ರಿ 10.30ಕ್ಕೆ ಅವರು ಸ್ಕೂಟಿಯಲ್ಲಿ ಅಡ್ಡಾಡುತ್ತಿದ್ದರು. ಸ್ಕೂಟಿ ಪೆಟ್ರೋಲ್ ಹಾಕಿಸಿ ಮುರುಡೇಶ್ವರ ರೈಲು ನಿಲ್ದಾಣದ ಸರ್ವೀಸ್ ರಸ್ತೆ ಮೇಲೆ ಅಡ್ಡಾಡುತ್ತಿದ್ದ ಅವರ ಸ್ಕೂಟಿಗೆ ಮಂಗಳಮುಖಿಯರಿಬ್ಬರು ಕೈ ಮಾಡಿದರು. ಅವರು ಮಂಗಳಮುಖಿಯರು ಎಂಬ ಅರಿವಿದ್ದರೂ ಅರುಣಕುಮಾರ ನಾಯ್ಕ ಅವರು ಸ್ಕೂಟಿ ನಿಲ್ಲಿಸಿ ಸರಸ-ಸಲ್ಲಾಪದ ಮಾತು ಆಲಿಸಿದರು.
ಅಲ್ಲಿದ್ದ ಮಂಗಳಮುಖಿಯೊಬ್ಬರು ಅರುಣಕುಮಾರ ಅವರ ಬಳಿ `ಬರುತ್ತಿಯಾ?’ ಎಂದು ಪ್ರಶ್ನೆ ಮಾಡಿದರು. ಆಗ, ಇನ್ನಿಬ್ಬರು ಮಂಗಳಮುಖಿಯರು ರೈಲು ನಿಲ್ದಾಣದ ಕಡೆಯಿಂದ ಅಲ್ಲಿಗೆ ಬಂದರು. ಅವರೆಲ್ಲರೂ ಸೇರಿ ಅರುಣಕುಮಾರ ಅವರಿಗೆ ಮುತ್ತಿಕ್ಕಿದರು. ಮೈಮೇಲೆ ಕೈ ಹಾಕಿ ಅಂಗಾಗ ಸ್ಪರ್ಶಿಸಿದರು. ಈ ವೇಳೆ ಮಂಗಳಮುಖಿಯೊಬ್ಬರು `ನಿನ್ನಲ್ಲಿ ಎಷ್ಟು ದುಡ್ಡಿದೆ?’ ಎಂದು ಪ್ರಶ್ನಿಸಿದರು. ಆಗ, ಅರುಣಕುಮಾರ ಅವರು `ನನ್ನಲ್ಲಿ ದುಡ್ಡಿಲ್ಲ’ ಎಂದರು. `ಈ ರೀತಿ ಮಾಡಬೇಡಿ’ ಎಂದು ಅರುಣಕುಮಾರ ಅವರು ಮನವಿ ಮಾಡಿದರು. ಆದರೆ, `ನಿನಗೆ ಪ್ರೀ’ ಎಂದು ಮಂಗಳಮುಖಿಯರೆಲ್ಲರೂ ಸೇರಿ ಆಫರ್ ನೀಡಿದರು.
ನಾಲ್ಕು ಜನ ಕೈ ಕೈ ಹಿಡಿದು `ಬಾ ಬಾ’ ಎನ್ನುತ್ತ ಕರೆಯುತ್ತ ಮೈ ಮುಟ್ಟಲು ಶುರು ಮಾಡಿದರು. ಆಗ, ಒಬ್ಬ ಮಂಗಳಮುಖಿ ಅರುಣಕುಮಾರ ಅವರ ಕತ್ತಿನ ಕಡೆ ಕೈ ಹಾಕಿದರು. ಅಲ್ಲಿಂದ ಬಂಗಾರದ ಸರ ತುಂಡರಿಸಿದರು. ಆ ಮಂಗಳಮುಖಿ ಮಂಕಿಕಡೆ ಹೊರಟಿದ್ದು, ಸುಮಾರು ಅರ್ದ ತಾಸಿನ ನಂತರ ಅರುಣಕುಮಾರ ಅವರಿಗೆ ಕತ್ತಿನಲ್ಲಿದ್ದ ಸರ ಕಾಣೆಯಾದ ವಿಷಯ ಅರಿವಿಗೆ ಬಂದಿತು. ಆಗ, ಅರುಣಕುಮಾರ ಅವರು ದೊಡ್ಡದಾಗಿ ಬೊಬ್ಬೆ ಹೊಡೆದರು. ಅಲ್ಲಿದ್ದ ಜನ `ಏನಾಯಿತು?’ ಎಂದು ಪ್ರಶ್ನಿಸಿದರು. ಆಗ, ಅವರು ಮಂಗಳಮುಖಿಯರು ಸೇರಿ ಬಂಗಾರ ಕದ್ದ ವಿಷಯ ಹೇಳಿದರು.
ಅಂದಾಜು 15 ಗ್ರಾಂ ತೂಕದ 1 ಲಕ್ಷ ರೂ ಮೌಲ್ಯದ ಚೈನ್ ಕಳ್ಳತನದ ಬಗ್ಗೆ ಅವರು ಮುರುಡೇಶ್ವರ ಪೊಲೀಸರಿಗೆ ದೂರು ನೀಡಿದರು. ನಾಲ್ವರು ಮಂಗಳಮುಖಿಯರು ಸೇರಿ ಚೈನ್ ಕದ್ದ ಬಗ್ಗೆ ಅವರು ವಿವರಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.