ಪ್ರಾಕೃತಿಕ ವಿಕೋಪಗಳಿಗೆ ಒಳಗಾಗುವ ಪ್ರದೇಶಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯು 2ನೇ ಪಟ್ಟಿಯಲ್ಲಿದೆ. `ಇಲ್ಲಿ ಕೈಗಾ ಅಣು ಸ್ಥಾವರ, ರಾಸಾಯನಿಕ ಕಾರ್ಖಾನೆ, ಅಣೆಕಟ್ಟುಗಳು, ನೌಕಾನೆಲೆಯಂತಹ ಪ್ರದೇಶಗಳಿರುವುದರಿಂದ ವಿಪತ್ತುಗಳು ಸಂಭವಿಸಿದ ತಕ್ಷಣ ರಕ್ಷಣಾ ಕಾರ್ಯಚರಣೆ ಕೈಗೊಳ್ಳಲು ಎಲ್ಲಾ ಮುನ್ನೆಚ್ಚರಿಕೆ ಸಿದ್ದತೆಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೇಳಿದ್ದಾರೆ. `ವಿವಿಧ ಬಗೆಯ ವಿಪತ್ತು ಸಂಭವಿಸಿದ ತುರ್ತು ಸನ್ನಿವೇಶಗಳಲ್ಲಿ ಸಮಯ ಪಾಲನೆ ಹಾಗೂ ಸಮಯ ಪ್ರಜ್ಞೆಯಿಂದ ಅನೇಕರ ಜೀವ ಉಳಿಸಲು ಸಾಧ್ಯ. ಜನರ ಜೀವ ಉಳಿಸಲು ಅಗತ್ಯವಿರುವ ವಾಹನ, ವೈದ್ಯಕೀಯ ವ್ಯವಸ್ಥೆಗೆ ಒತ್ತು ನೀಡಬೇಕು’ ಎಂದವರು ನಿರ್ದೇಶನ ನೀಡಿದ್ದಾರೆ.
ಕೈಗಾ ಅಣು ವಿದ್ಯುತ್ ಘಟಕದಲ್ಲಿ ಮಂಗಳವಾರ ವಿಪತ್ತು ನಿರ್ವಹಣೆ- ವೈದ್ಯಕೀಯ ಸಿದ್ಧತೆ -ಸಿಬಿಅರ್ಎನ್ – ಲಾಜಿಸ್ಟಿಕ್- ಇಂಟರ್ ಗ್ರೇಷನ್ ಆಯೋಜನೆಯ `ಸಮಯ್ ರೇಖಾ 2025’ರ ಸಮ್ಮೇಳನದಲ್ಲಿ ಅವರು ಮಾತನಾಡಿದ್ದಾರೆ. `ಪ್ರಾಕೃತಿಕ ವಿಪತ್ತು, ರಾಸಾಯನಿಕ ವಿಪತ್ತು, ಅಪಘಾತ ಸೇರಿದಂತೆ ಯಾವುದೇ ರೀತಿಯ ಅವಘಡ ನಡೆದಾಗ ತಕ್ಷಣ ಸ್ಪಂದಿಸಿದಾಗ ಜೀವ ಹಾನಿ ತಪ್ಪಿಸಲು ಸಾಧ್ಯ. ಇದಕ್ಕಾಗಿ ಎಲ್ಲಾ ಬಗೆಯ ಅಗತ್ಯ ಸಿದ್ಧತೆಗಳಿರಬೇಕು’ ಎಂದವರು ಹೇಳಿದ್ದಾರೆ. `ಜಿಲ್ಲೆಯಲ್ಲಿ ವಿಪತ್ತುಗಳನ್ನು ಎದುರಿಸುವ ಕುರಿತಂತೆ ಎಲ್ಲಾ ರೀತಿಯ ಅಣಕು ಕಾರ್ಯಚಾರಣೆಗಳನ್ನು ಆಗಾಗ ಕೈಗೊಳ್ಳುತ್ತಿದ್ದು, ಅಣುಕು ಕಾರ್ಯಚರಣೆ ಸಂದರ್ಭದಲ್ಲಿ ಕಂಡು ಬರುವ ನ್ಯೂನತೆಗಳ ಕುರಿತು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಅದು ನೈಜ ಸಂದರ್ಭದಲ್ಲಿ ಸಮರ್ಪಕವಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ’ ಎಂದವರು ಹೇಳಿದರು. `ವಿಪತ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಅಗತ್ಯವಿರುವ ಉಪಕರಣಗಳು, ವೈದ್ಯಕೀಯ ಸಾಮಗ್ರಿಗಳು, ವಾಹನಗಳು, ಮಾನವ ಸಂಪನ್ಮೂಲದ ಕುರಿತು ಸಮಗ್ರ ವಿವರಗಳನ್ನು ಪಟ್ಟಿ ಮಾಡಬೇಕು’ ಎಂದವರು ಸೂಚಿಸಿದರು.
ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಲಿಜೋ ಪಿ ಥಾಮಸ್ ಮಾತನಾಡಿ `ವಿಪತ್ತು ನಿರ್ವಹಣೆ ಕುರಿತಂತೆ ಮಕ್ಕಳಿಗೆ ಬಾಲ್ಯದಿಂದಲೇ ತರಬೇತಿ ನೀಡುವ ಕಾರ್ಯ ನಡೆಯಬೇಕು. ಶಾಲೆಗಳಿಲ್ಲಿ ವಿದ್ಯಾರ್ಥಿಗಳ ಮೂಲಕ ಅಣಕು ಕಾರ್ಯಚರಣೆ ನಡೆಸಬೇಕು’ ಎಂದರು. ಪೋಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಮಾತನಾಡಿ `ಪ್ರತಿ ಇಲಾಖೆಗಳಲ್ಲಿ ತಮ್ಮ ದೈನಂದಿನ ಕರ್ತವ್ಯಗಳ ಜೊತೆಗೆ ವಿಪತ್ತು ಸಂದರ್ಭದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು. ವಿವಿಧ ಹಿರಿಯ ಅಧಿಕಾರಿಗಳು ಹಾಜರಿದ್ದರು.