ಹೆದ್ದಾರಿ ಅಂಚಿನಲ್ಲಿ ಮೇಯುತ್ತಿದ್ದ ಎಮ್ಮೆಗಳಿಗೆ ಮೀನಿನ ಲಾರಿ ಡಿಕ್ಕಿ ಹೊಡೆದಿದೆ. ಹೀಗಾಗಿ ಅಂಕೋಲಾದ ಎರಡು ದಷ್ಟಪುಷ್ಟ ಎಮ್ಮೆಗಳು ಸಾವನಪ್ಪಿದೆ.
Advertisement. Scroll to continue reading.
ಅಂಕೋಲಾದ ಅವರ್ಸಾ ಗ್ರಾಮದ ವಿಕಾಸ ತಳೇಕರ ಅವರು ಜಾನುವಾರುಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಜೊತೆಗೆ ಅವರು ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದರು. ದಷ್ಟಪುಷ್ಟವಾದ ಎಮ್ಮೆಗಳನ್ನು ಸಾಕಿದ್ದ ವಿಕಾಸ ತಳೇಕರ್ ಅವರು ನಿತ್ಯ ಅವುಗಳ ಹಾಲು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದರು. ಹೀಗಿರುವಾಗ ಸೋಮವಾರ ಅವರು ತಮ್ಮ ಎಮ್ಮೆಗಳನ್ನು ಮೇವಿಗೆ ಬಿಟ್ಟಿದ್ದರು.
ಆ ಎಮ್ಮೆಗಳು ಹೆದ್ದಾರಿ ಅಂಚಿನಲ್ಲಿ ಬೆಳೆದ ಹುಲ್ಲುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆಗ, ಕಾರವಾರದಿಂದ ಅಂಕೋಲಾ ಕಡೆ ವೇಗವಾಗಿ ಬಂದ ಮೀನಿನ ಲಾರಿಯೊಂದು ಆ ಎಮ್ಮೆಗಳಿಗೆ ಡಿಕ್ಕಿ ಹೊಡೆಯಿತು. ಉಡುಪಿಯ ಅಬ್ದುಲ್ ರೇಹಮಾನ್ ಅವರು ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಮೀನು ಲಾರಿ ಓಡಿಸುತ್ತಿದ್ದು ಅವರ ಅತಿಯಾದ ವೇಗ ಎಮ್ಮೆಗಳ ಸಾವಿಗೆ ಕಾರಣವಾಯಿತು.
ಈ ಅವಘಡದಲ್ಲಿ ಕೋಣಕ್ಕೂ ಗಾಯವಾಗಿದ್ದು, ಈ ಎಲ್ಲಾ ಜಾನುವಾರುಗಳ ಮಾಲಕ ವಿಕಾಸ ತಳೇಕರ ನಷ್ಟ ಅನುಭವಿಸಿದರು. ಮೀನು ಲಾರಿಯೂ ಅಪಘಾತದಲ್ಲಿ ಜಖಂ ಆಯಿತು. ಹೀಗಾಗಿ ಎಮ್ಮೆ ಸಾವನಪ್ಪಿದ ನಷ್ಟ ಭರಿಸಲು ಲಾರಿ ಚಾಲಕ ಅಬ್ದುಲ್ ರೇಹಮಾನ್ ಒಪ್ಪಲಿಲ್ಲ. ಪ್ರೀತಿಯಿಂದ ಸಾಕಿದ್ದ ಎಮ್ಮೆಗಳ ಸಾವು ಹಾಗೂ ಗಾಯಗೊಂಡ ಕೋಣದ ಆರೈಕೆ ಬಗ್ಗೆ ತಲೆಕೆಡಿಸಿಕೊಂಡ ವಿಕಾಸ ತಳ್ಳೇಕರ್ ಅವರು ಈ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರು.
ವೇಗವಾಗಿ ಲಾರಿ ಓಡಿಸಿದಲ್ಲದೇ, ಎಮ್ಮೆಗಳನ್ನು ಕೊಂದ ಅಬ್ದುಲ್ ರೇಹಮಾನ್ ವಿರುದ್ಧ ದೂರು ನೀಡಿದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.