ಶಾಸಕ-ಸಂಸದರ ರಾಜಕೀಯ ಹೇಳಿಕೆಯೊಂದು ಇದೀಗ ಅವರ ವೈಯಕ್ತಿಕ ವರ್ಚಸ್ಸು ಕುಂದಿಸುವುದರ ಮಟ್ಟಿಗೆ ಚರ್ಚೆಯಾಗುತ್ತಿದೆ. ಶಾಸಕ-ಸಂಸದರು ಮೌನವಾಗಿದ್ದರೂ ಸಹ ಅವರ ಬೆಂಬಲಿಗರು ವಿಷಯವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಚನ್ನಾಗಿಯೇ ಇದ್ದಾರೆ. ಸದ್ಯ ರಾಜಕೀಯವಾಗಿ ಅವರು ಬೇರೆ ಬೇರೆ ನಿಲುವು ಹೊಂದಿದ್ದರಿoದ ಆ ವಿಷಯವಾಗಿ ಕ್ರಿಯೆ-ಪ್ರತಿಕ್ರಿಯೆ ನೀಡಿ ಸುಮ್ಮನಾಗಿದ್ದಾರೆ. ಆದರೆ, ಅವರ ಹಿಂಬಾಲಕರು ಇದೇ ವಿಷಯವನ್ನು ತಿರುಚಿ-ಮುರುಚಿ ಮತ್ತೆ ಮತ್ತೆ ಹೇಳುತ್ತಿದ್ದು, ಆ ಹೇಳಿಕೆಗಳು ಶಾಸಕ-ಸಂಸದರ ವೈಯಕ್ತಿಕ ಜೀವನಕ್ಕೆ ಘಾಸಿಗೊಳಿಸುತ್ತಿವೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಷ್ಟ್ರಗೀತೆ ವಿಷಯವಾಗಿ ಹೊನ್ನಾವರದಲ್ಲಿ ಮಾತನಾಡಿದ್ದರು. `ಜನಗಣಮನ ಎಂಬುದು ಬ್ರೀಟೀಷರನ್ನು ಸ್ವಾಗತಿಸಿದ ಗೀತೆ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರು ವಿರೋಧಿಸಿದ್ದರು. ಶಿವರಾಮ ಹೆಬ್ಬಾರ್ ಅವರ ಜೊತೆ ಅನೇಕ ಕಾಂಗ್ರೆಸ್ ನಾಯಕರು ಈ ಹೇಳಿಕೆ ವಿರೋಧಿಸಿದ್ದರು. ಶಿವರಾಮ ಹೆಬ್ಬಾರ್ ಅವರ ಹೇಳಿಕೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ವಿರೋಧಿಸಿದ್ದರು. ಈ ವೇಳೆ ಎನ್ ಎಸ್ ಹೆಗಡೆ ಅವರು `ಶಿವರಾಮ ಹೆಬ್ಬಾರ್ ಅವರು ಬಣ್ಣ ಬದಲಿಸುವ ವ್ಯಕ್ತಿ’ ಎಂದಿದ್ದು, ಹೆಬ್ಬಾರ್ ಅಭಿಮಾನಿಗಳಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಎನ್ ಎಸ್ ಹೆಗಡೆ ಅವರ ಹೇಳಿಕೆಗೆ ಸಂಬoಧಿಸಿ ಈ ದಿನ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಭಟ್ಟ ಬರಗದ್ದೆ ತಿರುಗೇಟು ನೀಡಿದ್ದಾರೆ. `ಶಿವರಾಮ ಹೆಬ್ಬಾರ್ ಅವರು 2018ರಲ್ಲಿ ತಮ್ಮ ನಿಲುವು ಬದಲಿಸದೇ ಇದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಕಾಗೇರಿ ಅವರು ಸ್ಪೀಕರ್ ಆಗುತ್ತಿರಲಿಲ್ಲ’ ಎಂದು ರವಿ ಭಟ್ಟ ಬರಗದ್ದೆ ಹೇಳಿದ್ದಾರೆ.