ಅರ್ದ ಬೆಲೆಗೆ ಗೃಹ ಉಪಯೋಗಿ ವಸ್ತು ನೀಡುವುದಾಗಿ ಜನರಿಂದ ಹಣಪಡೆದು ಪರಾರಿಯಾಗಿದ್ದ ಮೂವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. `ಗ್ಲೋಬಲ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಕೋಟ್ಯಂತರ ರೂ ಮೋಸ ಮಾಡಿದವರು ಜೈಲಿನ ಕಂಬಿ ಎಣಿಸುತ್ತಿದ್ದಾರೆ.
ಭಟ್ಕಳದಲ್ಲಿ ಗ್ಲೋಬಲ್ ಎಂಟರ್‌ಪ್ರೈಸಸ್ ಎಂಬ ಮಳಿಗೆಯೊಂದು ಈಚೆಗೆ ಶುರುವಾಗಿತ್ತು. ಶೇ 40ರಷ್ಟು ರಿಯಾಯತಿ ದರದಲ್ಲಿ ವಸ್ತುಗಳನ್ನು ನೀಡುವುದಾಗಿ ಈ ಕಂಪನಿ ನಂಬಿಸಿತ್ತು. ಅದರ ಪ್ರಕಾರ ಸಾವಿರಾರು ಜನರಿಂದ ಮುಂಗಡ ಹಣಪಡೆದು ಕೆಲವರಿಗೆ ವಸ್ತುಗಳನ್ನು ಸಹ ಪೂರೈಸಿತ್ತು. ಅದಾದ ನಂತರ ಇನ್ನಷ್ಟು ಜನರಿಂದ ಹಣಪಡೆದ ವಂಚಕರು ಊರು ಬಿಟ್ಟು ಓಡಿ ಹೋಗಿದ್ದರು.
ದಿಢೀರ್ ಆಗಿ ಮಳಿಗೆಗೆ ಬಾಗಿಲು ಹಾಕಿರುವುದನ್ನು ನೋಡಿ ಜನ ಕಂಗಾಲಾಗಿದ್ದರು. ಅಂಗಡಿಯ ಮುಂದೆ ಪ್ರತಿಭಟನೆಯನ್ನು ಸಹ ನಡೆಸಿದ್ದರು. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೇರಳ ಮತ್ತು ತಮಿಳುನಾಡು ಮೂಲದ ಎಂ ಗಣೇಶನ್, ತ್ಯಾಗರಾಜನ್, ಮತ್ತು ಮೈಯನಾದನ್ ಎಂಬಾತರನ್ನು ಬಂಧಿಸಿದ್ದಾರೆ. ಅಂಗಡಿ ಬಾಗಿಲು ಮುಚ್ಚಿ ಪರಾರಿಯಾಗಿದ್ದ ಮೂವರು ವಂಚಕರು ಇದೀಗ ಸಿಕ್ಕಿ ಬಿದ್ದಿದ್ದಾರೆ.