ರಸ್ತೆ ಅಪಘಾತದಲ್ಲಿನ ಸಾವು-ನೋವು ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕುಮಟಾ ಸಹಾಯಕ ಆಯುಕ್ತ ಪಿ ಶ್ರವಣಕುಮಾರ ಅವರು ಹಲವು ದಿಟ್ಟ ಕ್ರಮಗಳನ್ನು ಅನುಸರಿಸಿದ್ದು, `ಹೆಲ್ಮೇಟ್ ಧರಿಸದೇ ಓಡಾಡುವವರಿಗೆ ಪೆಟ್ರೋಲ್ ಕೊಡಬೇಡಿ’ ಎಂದು ಪೆಟ್ರೋಲ್ ಬಂಕ್ ಮಾಲಕರಿಗೆ ಸೂಚಿಸಿದ್ದಾರೆ. ಹೆಲ್ಮೇಟ್ ಧರಿಸದೇ ಬೈಕ್ ಓಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೂ ನಿರ್ದೇಶನ ನೀಡಿದ್ದಾರೆ.
Advertisement. Scroll to continue reading.
`ಈಚೆಗೆ ಕುಮಟಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದೆ. ಸಂಚಾರಿ ನಿಯಮ ಪಾಲನೆಯಲ್ಲಿನ ಲೋಪವೇ ಅಪಘಾತಕ್ಕೆ ಪ್ರಮುಖ ಕಾರಣ’ ಎಂದು ಶ್ರವಣಕುಮಾರ ಅವರು ವಿಶ್ಲೇಷಿಸಿದರು. `ಸಂಚಾರಿ ನಿಯಮ ಪಾಲನೆ ಸರಿಯಾಗಿ ಆಗದೇ ಇದ್ದರೆ ಅಮಾಯಕರ ಜೀವ ಹೋಗುವುದು ಹೆಚ್ಚಾಗಲಿದೆ. ಹೀಗಾಗಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದವರು ಹೇಳಿದರು. `ಬೈಕಿನಲ್ಲಿ ಸಂಚರಿಸುವವರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. 4 ವರ್ಷ ಮೇಲ್ಪಟ್ಟ ಹಿಂಬದಿ ಸವಾರರಿಗೂ ಹೆಲ್ಮೇಟ್ ಕಡ್ಡಾಯವಾಗಿದ್ದು, ಕುಮಟಾ ತಾಲೂಕಿನ ಎಲ್ಲಡೆ ಈ ಆದೇಶ ಪಾಲನೆಯಾಗಬೇಕು. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಪೊಲೀಸರಿಗೆ ಸೂಚಿಸಿದರು.
`ಈಗಾಗಲೇ ಕಡ್ಡಾಯವಾಗಿ ಹೆಲ್ಮೇಟ್ ಧರಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಬಗ್ಗೆ ಸಿದ್ಧತೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಗಳು ಸಭೆಗೆ ತಿಳಿಸಿದರು. `ಅಪಘಾತವಾದಾಗ ತಲೆಗೆ ಬೀಳುವ ಏಟಿನಿಂದ ಹೆಚ್ಚಿನವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕುಮಟಾ ವ್ಯಾಪ್ತಿಯ ಪೆಟ್ರೋಲ್ ಬಂಕಿನಲ್ಲಿ ಹೆಲ್ಮೇಟ್ ಧರಿಸದೇ ಬರುವ ಬೈಕ್ ಸವಾರರಿಗೆ ಪೆಟ್ರೋಲ್ ಕೊಡಬಾರದು’ ಎಂದು ಸಹಾಯಕ ಆಯುಕ್ತರು ಪೆಟ್ರೋಲ್ ಬಂಕ್ ಮಾಲಕರಿಗೆ ಸೂಚಿಸಿದರು. `ಪೆಟ್ರೋಲ್ ನೀಡಲು ನಿರಾಕರಿಸಿದರೆ ಬಂಕಿನ ಸಿಬ್ಬಂದಿ ಜೊತೆ ಸಾರ್ವಜನಿಕರ ಸಂಘರ್ಷವಾಗುವ ಸಾಧ್ಯತೆಯಿದೆ. ಈ ಹಿನ್ನಲೆ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಪೆಟ್ರೋಲ್ ಬಂಕ್ ಮಾಲಕರು ಈ ವೇಳೆ ಮನವಿ ಮಾಡಿದರು. `ಅಗತ್ಯ ಭದ್ರತೆ ನೀಡಲು ಬದ್ಧ’ ಎಂದು ಪೊಲೀಸರು ತಿಳಿಸಿದರು.
`ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ತಮ್ಮ ಬಂಕುಗಳಲ್ಲಿ ಈ ಬಗ್ಗೆ ಬ್ಯಾನರ್ ಅಳವಡಿಸಬೇಕು. ಹೆಲ್ಮೇಟ್ ಧರಿಸದೇ ಬರುವವರಿಗೆ ಪೆಟ್ರೋಲ್ ಸಿಗುವುದಿಲ್ಲ. ಎಂಬ ಬರಹವನ್ನು ಸ್ಪಷ್ಠವಾಗಿ ಬರೆಯಬೇಕು. ಜೊತೆಗೆ `ಕಾರಿನಲ್ಲಿ ಬರುವವರು ಸಹ ಸೀಟ್ ಬೆಲ್ಟ ಧರಿಸುವುದು ಕಡ್ಡಾಯ’ ಎಂದು ಪ್ರಚಾರ ಮಾಡಬೇಕು ಶ್ರವಣಕುಮಾರ ಅವರು ಬಂಕ್ ಮಾಲಕರಿಗೆ ಸೂಚಿಸಿದರು. ಪೊಲೀಸ್ ಇಲಾಖೆ ಜೊತೆ ಆಹಾರ ನಿರೀಕ್ಷಕರು ಈ ಬಗ್ಗೆ ಪೆಟ್ರೊಲ್ ಬಂಕ್’ಗೆ ತೆರಳಿ ತಪಾಸಣೆ ನಡೆಸಬೇಕು ಎಂದು ನಿರ್ದೇಶಿಸಿದರು.
ಕಾಲೇಜು ಯುವಕ-ಯುವತಿಯರು ಲೈಸನ್ಸಪಡೆಯದೇ ಬೈಕು-ಕಾರು ಓಡಿಸುವುದರ ಬಗ್ಗೆ ಶ್ರವಣಕುಮಾರ ಅವರು ಗಮನಸೆಳೆದರು. 18 ವರ್ಷದೊಳಗಿನ ಮಕ್ಕಳ ವಾಹನ ಚಾಲನೆ ಬಗ್ಗೆ ಅವರು ಕಳವಳವ್ಯಕ್ತಪಡಿಸಿದರು. ಒಂದೇ ಬೈಕಿನಲ್ಲಿ ಮೂವರು ಚಲಿಸುವುದು ಹಾಗೂ ಅತಿಯಾದ ವೇಗದಲ್ಲಿ ಓಡಾಡುವುದರ ಬಗ್ಗೆ ಗಮನಿಸಲು ಸೂಚಿಸಿದರು. `ಪರವಾನಿಗೆ ಪಡೆಯದೇ ಬೈಕ್ ಓಡಿಸುವ ಮಕ್ಕಳನ್ನು ಗುರುತಿಸಿ ಅವರ ಪಾಲಕರನ್ನು ಕಾಲೇಜಿಗೆ ಕರೆಯಿಸಬೇಕು. ಅಂಥ ವಾಹನ ಮಾಲಕರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ವಿವಿಧ ಶಾಲಾ-ಕಾಲೇಜಿನವರಿಗೆ ಸಹಾಯಕ ಆಯುಕ್ತ ಶ್ರವಣಕುಮಾರ ಅವರು ಸೂಚನೆ ನೀಡಿದರು. ಕೆಲವಡೆ ಸರ್ಕಾರಿ ನೌಕರರು ಸಹ ಸಂಚಾರಿ ನಿಯಮ ಪಾಲಿಸದಿರುವುದು ಗಮನಕ್ಕೆ ಬಂದಿದ್ದು, ಅಂಥವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.