ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಚೀನಾದಲ್ಲಿ ಸಹ ಬ್ಯಾಂಕ್ ಖಾತೆ ಹೊಂದಿದ್ದಾರೆ. ಆ ಖಾತೆ ಮೂಲಕವೂ ಅವರು ಕೋಟಿ ಕೋಟಿ ರೂ ವ್ಯವಹಾರ ನಡೆಸಿರುವುದು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಗೊತ್ತಾಗಿದೆ!
ಬಳ್ಳಾರಿಯ ಅದಿರನ್ನು ಸತೀಶ್ ಸೈಲ್ ಅವರು ತಮ್ಮ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ವಿದೇಶಕ್ಕೆ ರವಾನಿಸಿದ್ದಾರೆ. ತಮ್ಮ ಕಂಪನಿಗೆ 27 ಕೋಟಿ ರೂಪಾಯಿ ಲಾಭ ಮಾಡುವುದಕ್ಕಾಗಿ ಸತೀಶ್ ಸೈಲ್ ಅವರು ಸರ್ಕಾರಿ ಬೊಕ್ಕಸಕ್ಕೆ 44.9 ಕೋಟಿ ರೂ ನಷ್ಟ ಮಾಡಿದ್ದಾರೆ. ನೈಜ ಖರೀದಿದಾರರಿಗೆ ಅದಿರು ರಪ್ತು ಮಾಡದೇ ಅವರು ವಿವಿಧ ವಿದೇಶಿ ಕಂಪನಿಗಳ ಮೂಲಕ ಅದಿರನ್ನು ಮಾರಾಟ ಮಾಡಿದ್ದಾರೆ. ಈ ವ್ಯವಹಾರಕ್ಕೆ ಅನುಕೂಲವಾಗುವಂತೆ ಸತೀಶ್ ಸೈಲ್ ಅವರು ಚೀನಾದ ಹಾಂಕಾoಗ್ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಐಸಿಬಿಸಿ ಬ್ಯಾಂಕ್ ಹಾಂಕಾoಗ್’ದಲ್ಲಿ ಖಾತೆ ಹೊಂದಿದ್ದಾರೆ!
ಇನ್ನೂ ಮುಖ್ಯವಾದ ಸಂಗತಿ ಎಂದರೆ ಸತೀಶ್ ಸೈಲ್ ಅವರು ಚೀನಾದಲ್ಲಿ ಸಹ ತಮ್ಮದೇ ಕಂಪನಿಗೆ ತಾವು ರವಾನಿಸಿದ ಅದಿರು ಮಾರಾಟ ಮಾಡಿದ್ದಾರೆ. ಬಳ್ಳಾರಿಯಿಂದ ಹೊರಟ ಅದಿರು ಸತೀಶ್ ಸೈಲ್ ಅವರ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯಿoದ ಮಾರಾಟವಾಗಿದ್ದು, ಚೀನಾದಲ್ಲಿ ಸತೀಶ್ ಸೈಲ್ ಅವರ ಒಡೆತನದಲ್ಲಿರುವ ಜಿಐ ಐರನ್ & ಸ್ಟೀಲ್ ಇನ್ವೆಸ್ಟಮೆಂಟ್ ಕಂಪನಿ ಅದನ್ನು ಖರೀದಿಸಿದೆ. ಅದಾದ ನಂತರ ಇನ್ನಿತರ ಕಂಪನಿಗಳಿಗೆ ಆ ಅದಿರು ಮಾರಾಟವಾಗಿದೆ. ಜಾರಿ ನಿರ್ದೇಶನಾಲಯವೂ ಈ ಎಲ್ಲಾ ವಿಷಯವನ್ನು ದೋಷಾರೋಪಣ ಪಟ್ಟಿ ಮೂಲಕ ನ್ಯಾಯಾಲಯಕ್ಕೆ ತಿಳಿಸಿದೆ.