ಆಧಾರ್ ಕಾರ್ಡಿನಲ್ಲಿರುವ ವಿಳಾಸ ಬದಲಾವಣೆ ಮಾಡಲು ಬಯಸುವವರಿಗೆ ಸರ್ಕಾರ ಉಚಿತವಾಗಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. 2026ರ ಜೂನ್ 14ರವರೆಗೆ ಉಚಿತ ಆಧಾರ್ ಅಪ್ಡೇಟ್ ಸೇವೆ ಚಾಲ್ತಿಯಲ್ಲಿರಲಿದೆ. `10 ವರ್ಷಗಳ ಹಿಂದೆ ಆಧಾರ್ ಕಾರ್ಡ ಮಾಡಿಸಿ, ಸದ್ಯ ವಾಸಸ್ಥಳ ಬದಲಾವಣೆ ಆದವರು ಉಚಿತವಾಗಿ ಸಿಗುವ ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕರೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಧಾರ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು `ಈಗಾಗಲೇ ಆಧಾರ್ ಕಾರ್ಡ್ ಪಡೆದಿರುವ 5 ವರ್ಷ ಮತ್ತು 15 ವರ್ಷ ಪೂರ್ಣಗೊಂಡಿರುವ ಮಕ್ಕಳ ಆಧಾರ್ ಅಪ್ಡೇಟ್‌ನ್ನು ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ’ ಎಂದು ತಿಳಿಸಿದರು. `ಎಲ್ಲಾ ಅಂಚೆ ಕಚೇರಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿರುವ ಆಧಾರ್ ಸೇವಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.
`ಯಾವುದೇ ರೀತಿಯ ತಾಂತ್ರಿಕ ತೊಂದರೆಗಳಿದ್ದಲ್ಲಿ ಜಿಲ್ಲಾ ಆಧಾರ್ ಸಮಾಲೋಚಕರನ್ನು ಸಂಪರ್ಕಿಸಬೇಕು. ಅವರ ನೆರವು ಪಡೆಯುವುದರ ಮೂಲಕ ಜಿಲ್ಲೆ ಸಾರ್ವಜನಿಕರಿಗೆ ಆಧಾರ್ ನೋಂದಣಿ, ತಿದ್ದುಪಡಿ ಸಂಬoಧಿತ ಯಾವುದೇ ಸಮಸ್ಯೆಗಳಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದು ಸೂಚಿಸಿದರು. ಎಲ್ಲಾ ಶಾಲಾ ಮಕ್ಕಳ ಆಧಾರ್ ಅಪ್ ಡೇಟ್ ಮಾಡುವ ಕುರಿತು ಕ್ಲಸ್ಟರ್ ಮಟ್ಟದಲ್ಲಿ ಶಿಬಿರ ಆಯೋಜಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. `ಎಂಡೋ ಸಲ್ಫಾನ್ ಪೀಡಿತರಿಗೆ ಮತ್ತು ಹಾಸಿಗೆ ಪೀಡಿತರಿಗೆ ಮನೆಗಳಿಗೆ ತೆರಳಿ ಆಧಾರ್ ಸೌಲಭ್ಯ ಒದಗಿಸಬೇಕು. ಜಿಲ್ಲೆಯಲ್ಲಿ 16,65,285 ಆಧಾರ್ ಕಾರ್ಡ್ಗಳಿದ್ದು, ಇವುಗಳಲ್ಲಿ 15,68,157 ಕಾರ್ಡ್ಗಳು ಮೊಬೈಲ್ ಸೀಡ್ ಆಗಿದ್ದು ಬಾಕಿ ಇರುವ 97,128 ಆಧಾರ್ ಕಾರ್ಡ್ ಗಳ ಸೀಡಿಂಗ್ ಮಾಡುವ ಕುರಿತಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಯಾವುದೇ ಅನಧಿಕೃತ ಆಧಾರ್ ಕೇಂದ್ರಗಳು ಮತ್ತು ಆಧಾರ್ ತಿದ್ದುಪಡಿ ಮಾಡುವ ಕೇಂದ್ರಗಳು ಕಾರ್ಯನಿರ್ವಹಿಸದಂತೆ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿ ಪಂ ಉಪಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಬೆಂಗಳೂರಿನ ಆಧಾರ್ ಪ್ರಾದೇಶಿಕ ಕೇಂದ್ರದ ಮೆನೇಜರ್ ಮೊಹಮದ್ ಮುಸಾಬ್, ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ಹಾಗೂ ಲೀಡ್ ಬ್ಯಾಂಕ್ ಮತ್ತು ಅಂಚೆ ಕಚೇರಿಯ ಅಧಿಕಾರಿಗಳು ಹಾಜರಿದ್ದರು.
ಆಧಾರ್ ತಿದ್ದುಪಡಿಗಾಗಿ ಇಲ್ಲಿ ಕ್ಲಿಕ್ಕಿಸಿ: myAadhaar.uidai.gov.in