`ಮನೆಯಲ್ಲೇ ಕುಳಿತು ಮೂರು ಸಾವಿರ ರೂ ಗಳಿಸಿ’ ಎಂಬ ಮೋಸದ ಜಾಹೀರಾತಿಗೆ ಬಲಿಯಾದ ಮಹಿಳೆಯೊಬ್ಬರು 10ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಈಗಾಗಲೇ ಉತ್ತಮ ಉದ್ಯೋಗಿವಿದ್ದರೂ ಬಿಡುವಿನ ವೇಳೆ ಇನ್ನಷ್ಟು ಹಣಗಳಿಸುವ ಆಸೆಗೆ ಬಿದ್ದ ಮಹಿಳೆ ತಮ್ಮ ಸಂಪಾದನೆಯ ಹಣವನ್ನು ವಂಚಕರಿಗೆ ವರ್ಗಾಯಿಸಿದ್ದಾರೆ.
ಕಾರವಾರದ ಸ್ವಪ್ನಾ ಸುರೇಶ ಮಹೇಕರ (32) ಅವರು ಟೆಲಿಗ್ರಾಂ ಖಾತೆ ಪರಿಶೀಲಿಸಿದಾಗ ಅಲ್ಲಿ ಅವರಿಗೆ `ಆನ್‌ಲೈನ್ ಜಾಬ್ ಮಾಡಿ. ದಿನಕ್ಕೆ 3 ಸಾವಿರ ರೂ ಹಣಗಳಿಸಿ’ ಎಂಬ ಜಾಹೀರಾತು ಕಾಣಿಸಿದೆ. ಆ ಜಾಹೀರಾತು ಮೋಡಿಗೆ ಒಳಗಾದ ಅವರು ವಂಚಕರನ್ನು ಸಂಪರ್ಕಿಸಿದ್ದಾರೆ. ಅದಾದ ನಂತರ ಸ್ವಪ್ನಾ ಮಹೇಕರ ಅವರಿಗೆ ವಾಟ್ಸಪ್ ಮೂಲಕ ಮೆಸೆಜ್ ಬಂದಿದೆ. `ರೆಂಟ್’ ಎಂಬ ವೆಬ್‌ಸೈಟ್ ತೆರೆದುಕೊಂಡಿದ್ದು, ಅಲ್ಲಿ ಸ್ವಪ್ನಾ ಮಹೇಕರ ಅವರು ತಮ್ಮ ವೈಯಕ್ತಿಕ ವಿವರ ದಾಖಲಿಸಿದ್ದಾರೆ. ನಂತರ ಆ ವೆಬ್‌ಸೈಟಿನ ಒಳಗೆ ಲಾಗಿನ್ ಆಗಿದ್ದಾರೆ.
ಅದಾದ ನಂತರ ಆ ವೆಬ್‌ಸೈಟಿನಲ್ಲಿ ವಿವಿಧ ಉತ್ಪನ್ನಗಳಿದ್ದು, ಅದಕ್ಕೆ ಸ್ಟಾರ್ ರೇಟಿಂಗ್ ಕೊಡುವಂತೆ ಸ್ವಪ್ನಾ ಮಹೇಕರ ಅವರಿಗೆ ಸೂಚನೆ ಬಂದಿದೆ. ಅದರ ಪ್ರಕಾರ ಅವರು ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. ಉತ್ಪನ್ನಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಬರೆದಿದ್ದಾರೆ. ನಂತರ 10 ಸಾವಿರ ರೂ ಹೂಡಿಕೆ ಮಾಡುವಂತೆ ಸ್ವಪ್ನಾ ಅವರಿಗೆ ಸೂಚನೆ ಬಂದಿದೆ. ಅವರು 10 ಸಾವಿರ ರೂ ಹೂಡಿಕೆ ಮಾಡಿದ್ದರಿಂದ ಅವರಿಗೆ 15268ರೂ ಮರಳಿ ಸಿಕ್ಕಿದೆ. ಇದರಿಂದ ಸ್ವಪ್ನಾ ಮಹೇಕರ ಅವರಿಗೆ `ಮನೆಯಲ್ಲಿ ಕುಳಿತು ಮೂರು ಸಾವಿರ ರೂ ಗಳಿಸಿ’ ಎಂಬ ಜಾಹೀರಾತಿನ ಮೇಲೆ ನಂಬಿಕೆ ಬಂದಿದೆ.
ಅದಾದ ನಂತರ ಸ್ವಪ್ನಾ ಮಹೇಕರ ಅವರಿಗೆ `ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ, ಇನ್ನಷ್ಟು ಲಾಭಗಳಿಸಿ’ ಎಂದು ವಂಚಕರು ಹೇಳಿದ್ದಾರೆ. ಆದರೆ, ಹಣ ಇಲ್ಲದ ಕಾರಣ ಸ್ವಪ್ನಾ ಅವರು ಅಂಕೋಲಾ ಅವರ್ಸಾದ ರೋಹನ್ ತಾಂಡೇಲ್ ಹಾಗೂ ಕಾರವಾರದ ತೇಜಸ್ ಅವರ ನೆರವುಪಡೆದು ಹಣ ಹೂಡಿಕೆ ಮಾಡಿದ್ದಾರೆ. ರೋಹನ್ ತಾಂಡೇಲ್ ಹಾಗೂ ತೇಜಸ್ ಸಹ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದು, 1098113ರೂ ಹಣವನ್ನು ಸ್ವಪ್ನಾ ಮಹೇಕರ ಅವರು ವಂಚಕರ ಖಾತೆಗೆ ಹಾಕಿದ್ದಾರೆ.
ಆದರೆ, ಈವರೆಗೂ ಅವರು ಹೂಡಿಕೆ ಮಾಡಿದ ಹಣ ಮರಳಿ ಬಂದಿಲ್ಲ. ಮನೆಯಲ್ಲಿ ಕುಳಿತಿದ್ದರೂ ಮೂರು ಸಾವಿರ ರೂ ಆದಾಯ ಸಿಕ್ಕಿಲ್ಲ. ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದ ರೋಹನ್ ತಾಂಡೇಲ್ ಹಾಗೂ ತೇಜಸ್ ಸಹ ಆ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ಸ್ವಪ್ನಾ ಮಹೇಕರ್ ಅವರಿಗೆ ತಾವು ಮೋಸ ಹೋಗಿದ್ದು ಅರಿವಾಗಿದೆ. `ನಮ್ಮಂತೆ ನೀವು ಮೋಸಹೋಗಬೇಡಿ’ ಎಂದು ಅವರು ಜನರಲ್ಲಿ ಅರಿವು ಮೂಡಿಸಿದ್ದಾರೆ. ಜೊತೆಗೆ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ತಮಗಾದ ಅನ್ಯಾಯ ವಿವರಿಸಿ ವಂಚಕರ ವಿರುದ್ಧ ದೂರು ನೀಡಿದ್ದಾರೆ.
`ಆಮೀಷಗಳಿಗೆ ಬಲಿಯಾಗಬೇಡಿ. ವಂಚಕರ ಜಾಲಕ್ಕೆ ಸಿಲುಕಬೇಡಿ’