ಬೀದಿ ನಾಯಿ ದಾಳಿಯಿಂದ ಸಂತ್ರಸ್ತರಾದವರಿಗೆ ಸರ್ಕಾರ 5 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ಪರಿಹಾರ ವಿತರಿಸುತ್ತದೆ. ಆದರೆ, ಮಾಹಿತಿ ಕೊರತೆಯಿಂದಾಗಿ ಇದಕ್ಕೆ ಅರ್ಜಿ ಹಾಕುವವರೇ ಇಲ್ಲ!
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿಯೂ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆ ನೆಪದಲ್ಲಿ ಆಡಳಿತದಲ್ಲಿರುವವರು ಲಕ್ಷಾಂತರ ರೂ ವೆಚ್ಚ ಮಾಡುತ್ತಿದ್ದಾರೆ. ಅದಾಗಿಯೂ ವರ್ಷದಿಂದ ವರ್ಷಕ್ಕೆ ಬೀಡಾಡಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ವಿನ: ಸಮಸ್ಯೆ ಮಾತ್ರ ತಪ್ಪುತ್ತಿಲ್ಲ.
ಅದರಲ್ಲಿಯೂ ಅನೇಕ ಬಗೆಯ ಆಕ್ರಮಣಕಾರಿ ಬೀದಿ ನಾಯಿಗಳು ಜಿಲ್ಲೆಯಲ್ಲಿವೆ. ಚಿಕ್ಕ ಮಕ್ಕಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ನಾಯಿಗಳ ವಿರುದ್ಧ ಜನಸಾಮಾನ್ಯರು ಪ್ರತಿಭಟಿಸಿದರೂ ಅವುಗಳ ವಿರುದ್ಧ ಕಠಿಣ ಕ್ರಮವಾಗಿಲ್ಲ. ಈ ಎಲ್ಲದರ ನಡುವೆ ಬೀದಿ ನಾಯಿ ಆಕ್ರಮಣಕ್ಕೆ ಒಳಗಾದವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದೆ. ಆದರೆ, ಆ ಆದೇಶ ಪಾಲನೆಯೂ ಆಗುತ್ತಿಲ್ಲ. ಆಕ್ರಮಕ್ಕೆ ಒಳಗಾದವರು ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸುತ್ತಿಲ್ಲ.
ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೂನುಗಾರಿಕೆ ಮಂತ್ರಾಲಯವೂ 2023ರಲ್ಲಿ ಪ್ರಾಣಿ ಸಂತಾನ ನಿಯಂತ್ರಣ ನಿಯಮವನ್ನು ಜಾರಿಗೆ ತಂದಿದೆ. ರಾಜ್ಯಮಟ್ಟದಲ್ಲಿಯೂ ಪ್ರಾಣಿ ಸಂತಾನ ನಿಯಂತ್ರಣ ಮೇಲ್ವಿಚಾರಣೆ ಹಾಗೂ ಅನುಷ್ಠಾನ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಧಾರವಾಡ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾದ ರಿಟ್ ಪಿಟಿಶನ್ ಅನ್ವಯ ಬೀದಿ ನಾಯಿಗಳ ಹಾವಳಿಯಿಂದ ಸಂತ್ರಸ್ತರಾದವರಿಗೆ ಸರ್ಕಾರ ಪರಿಹಾರ ವಿತರಿಸಲು ಆಸಕ್ತಿವಹಿಸಿದೆ. ಅದರ ಪ್ರಕಾರ ನಾಯಿ ದಾಳಿಗೆ ಒಳಗಾದವರ ಚಿಕಿತ್ಸಾ ವೆಚ್ಚ ಭರಿಸುವುದು ಸ್ಥಳೀಯ ಆಡಳಿತದ ಹೊಣೆಯಾಗಿದೆ.
ಆದರೆ, ಜನ ಜಾಗೃತಿ ಕೊರತೆಯಿಂದ ಬೀದಿ ನಾಯಿ ಆಕ್ರಮಣಕ್ಕೆ ಒಳಗಾದವರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡುತ್ತಿಲ್ಲ. ನಾಯಿ ದಾಳಿಗೆ ಒಳಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾದವರ ಮಾಹಿತಿಯೂ ಸಮನ್ವಯ ಕೊರತೆಯಿಂದ ನಗರ ಸಂಸ್ಥೆಗಳಿಗೆ ತಲುಪುತ್ತಿಲ್ಲ. ನಾಯಿ ಆಕ್ರಮಣಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುವವರ ವಿವರ ಸರ್ಕಾರಕ್ಕೆ ಸಿಗುತ್ತಿಲ್ಲ. ಈ ಎಲ್ಲಾ ಹಿನ್ನಲೆ ಸಂತ್ರಸ್ತರಿಗೆ ಬೀದಿ ನಾಯಿಗಳ ಆಕ್ರಮಣಕ್ಕೆ ಒಳಗಾದವರಿದ್ದರೂ ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ.
ಬೀದಿ ನಾಯಿ ಕಚ್ಚಿ ಗಾಯಗೊಂಡ ಪ್ರತಿಯೊಬ್ಬರಿಗೂ 5 ಸಾವಿರ ರೂ ಕನಿಷ್ಟ ನೆರವು ನೀಡುವಂತೆ ಸರ್ಕಾರ ಸೂಚಿಸಿದೆ. ನಾಯಿ ಆಕ್ರಮಣದಿಂದ ಸಾವನಪ್ಪಿದವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಒದಗಿಸಲು ನಿರ್ದೇಶನವಿದೆ. ಇದಕ್ಕಾಗಿ ಸ್ಥಳೀಯ ಸಂಸ್ಥೆ ಮುಖ್ಯಸ್ಥರು, ತಾಲೂಕು ಆರೋಗ್ಯ ಅಧಿಕಾರಿಗಳು, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಸ್ಥಳೀಯ ಸಂಸ್ಥೆ ಆರೋಗ್ಯ ಅಧಿಕಾರಿ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ.
ಬೀದಿ ನಾಯಿ ದಾಳಿ ನಡೆದ ನಂತರ ದೂರು ಬರೆದೇ ಇದ್ದರೂ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿ ಆಧಾರದ ಮೇಲೆ ವಿವರಪಡೆದು ಮುಂದಿನ ಕ್ರಮ ಜರುಗಿಸಲು ಸರ್ಕಾರದ ನಿರ್ದೇಶನವಿದೆ. ದಾಳಿಗೆ ಒಳಗಾದವರಿಗೆ ಯೋಗ್ಯ ಚಿಕಿತ್ಸೆ ಒದಗಿಸುವುದು, ಮಹಜರು ನಡೆಸುವುದು, ಪರಿಹಾರ ವಿತರಣೆವರೆಗಿನ ಎಲ್ಲಾ ಜವಾಬ್ದಾರಿಗಳನ್ನು ಸಮಿತಿಗೆವಹಿಸಲಾಗಿದೆ. ಆದರೆ, ಇಲಾಖೆಗಳ ನಡುವಿನ ಸಮನ್ವಯ ಕೊರತೆ ಹಾಗೂ ಜನ ಜಾಗೃತಿ ಸಮಸ್ಯೆಯಿಂದ ಬೀದಿ ನಾಯಿ ದಾಳಿಗೆ ಒಳಗಾದವರಿಗೆ ಪರಿಹಾರ ಸಿಗುತ್ತಿಲ್ಲ.