ವೃದ್ದಾಪ್ಯ ವೇತನಕ್ಕಾಗಿ ಅಲೆದಾಟ ನಡೆಸಿ ಸುಸ್ತಾದ ರಾಧಾ ಆಚಾರಿ ಅವರು ತಮಗಾದ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದು, ಅಲ್ಲಿಂದ ಸ್ಪಂದನೆ ಸಿಕ್ಕಿದೆ. ಮಹಿಳೆಗಾದ ಸಮಸ್ಯೆ ಆಲಿಸಿ ನಿಯಮಾನುಸಾರ ಬಗೆಹರಿಸುವಂತೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಎಂ ಶಾಂತಪ್ಪ ಅವರು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರಿಗೆ ಸೂಚಿಸಿದ್ದಾರೆ.
ಕುಮಟಾ ಉಪ್ಪಾರಕೇರಿಯ ರಾಧಾ ಕೃಷ್ಣ ಆಚಾರಿ ಅವರಿಗೆ 75 ವರ್ಷವಾಗಿದ್ದು, ಅವರಿಂದ ದುಡಿಮೆ ಸಾಧ್ಯವಿಲ್ಲ. ಹೀಗಾಗಿ ಅವರು ಕುಮಟಾ ತಹಶೀಲ್ದಾರ್ ಕಚೇರಿಗೆ ಅರ್ಜಿ ನೀಡಿ ವೃದ್ಧಾಪ್ಯ ವೇತನಕ್ಕೆ ಮನವಿ ಮಾಡಿದ್ದರು. ಆದರೆ, ರಾಧಾ ಅವರು ಕೆಲಸ ಮಾಡುವ ಸಾಮರ್ಥ್ಯಹೊಂದಿದ ಕಾರಣ ನೀಡಿ ಅಲ್ಲಿನವರು ಪಿಂಚಣಿ ಯೋಜನೆ ತಡೆ ಹಿಡಿದಿದ್ದರು.
ಸರ್ಕಾರದಿಂದ ಬರುವ 1200ರೂ ಪಿಂಚಣಿ ಕೈ ತಪ್ಪಿದ ಬಗ್ಗೆ ರಾಧಾ ಆಚಾರಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರಿಗೆ ದೂರಿದ್ದರು. ಆಗ್ನೇಲ್ ರೋಡಿಗ್ರಸ್ ಅವರ ನೆರವುಪಡೆದು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದರು. `ಬಿಪಿ, ಶುಗರ್ ಕಾರಣ ಕೈ ನಡುಗುತ್ತಿದೆ. ಕೆಲಸ ಮಾಡಲು ಆಗುತ್ತಿಲ್ಲ. ಅನ್ಯಾಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದರು.
ಆ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಒಂದೇ ತಿಂಗಳ ಅವಧಿಯಲ್ಲಿ ಸ್ಪಂದನೆ ಸಿಕ್ಕಿರುವುದಕ್ಕೆ ಜನಸಾಮಾನ್ಯ ಕೇಂದ್ರದವರು ಸಂತಸವ್ಯಕ್ತಪಡಿಸಿದ್ದಾರೆ.