ಕಬ್ಬಿಣ ಸಾಮಗ್ರಿ ವ್ಯಾಪಾರ ಮಳಿಗೆಗೆ ಹೋಗಿದ್ದ ಇಫರಾನ್ ಶೇಖ್ ಅವರು `ಕೆಜಿ ಕಬ್ಬಿಣದ ಮೇಲೆ 2 ರೂ ಕಡಿಮೆ ಮಾಡಿ’ ಎಂದಿದ್ದಾರೆ. ಇದರಿಂದ ಸಿಟ್ಟಾದ ಮಳಿಗೆ ಮಾಲಕ ಯಾಸಿನ್ ಬಿಳಗಿ ಅವರು ಗ್ರಾಹಕನ ಕೆನ್ನೆಗೆ ಬಾರಿಸಿದ್ದಾರೆ!
ಶಿರಸಿಯ ರಾಮನಬೈಲಿನಲ್ಲಿ ಇಪರಾನ್ ಶೇಖ ಅವರು ವಾಸವಾಗಿದ್ದಾರೆ. ಅವರು ಸಹ ವ್ಯಾಪಾರಿಯಾಗಿದ್ದು, ಅಗತ್ಯ ಕಬ್ಬಿಣ ಖರೀದಿಗೆ ಅಲೆದಾಡುತ್ತಿದ್ದಾರೆ. ಹೀಗಿರುವಾಗ ನವೆಂಬರ್ 14ರಂದು ಅವರು ಕೆರೆಗುಂಡಿಯಲ್ಲಿರುವ ಯಾಸಿನ್ ಸ್ಟೀಲ್ ಅಂಗಡಿಗೆ ಹೋಗಿದ್ದರು. ಅಲ್ಲಿದ್ದ ಯಾಸಿನ್ ಬಿಳಗಿ ಅವರಲ್ಲಿ ಕಬ್ಬಿಣದ ರೇಟ್ ವಿಚಾರಿಸಿದ್ದರು.
ಯಾಸಿನ್ ಬಿಳಗಿ ಅವರು `ಪ್ರತಿ ಕೆಜಿ ಕಬ್ಬಿಣಕ್ಕೆ 79ರೂ’ ಎಂದು ಹೇಳಿದ್ದಾರೆ. ಆಗ, ಇಪರಾನ್ ಶೇಖ ಅವರು `77ರೂ ಮಾಡಿ ಕೊಡಿ’ ಎಂದು ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಾದ ಯಾಸಿನ್ ಬಿಳಿಗಿ ಏಕಾಏಕಿ ಕೂಗಾಟ ನಡೆಸಿದ್ದಾರೆ. ಜೊತೆಗೆ ಇಫರಾನ್ ಶೇಖ್ ಅವರ ಕೆನ್ನೆಗೆ ಬಾರಿಸಿದ್ದಾರೆ.
ಈ ಅವಮಾನ ಸಹಿಸದ ಇಪರಾನ್ ಶೇಖ ಅವರು ಅದೇ ದಿನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮಗಾದ ಹಿಂಸೆಯ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರಿಗೆ ವಿವರಿಸಿದ್ದಾರೆ. ಅದಾದ ನಂತರ ನ್ಯಾಯಾಲಯಕ್ಕೆ ಹೋಗಿ ಅನ್ಯಾಯದ ಬಗ್ಗೆ ತಿಳಿಸಿದ್ದು, ನ್ಯಾಯಾಲಯದ ಸೂಚನೆ ತಂದು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.