ಬಿಹಾರಕ್ಕೆ ಅಡಿಕೆ ಕಳುಹಿಸಿದ ವ್ಯಾಪಾರಿಯೊಬ್ಬರಿಗೆ ಬಾರೀ ಪ್ರಮಾಣದಲ್ಲಿ ಮೋಸವಾಗಿದೆ. ಅಡಿಕೆ ಜೊತೆ ಕಾಳು ಮೆಣಸನ್ನು ತರಿಸಿಕೊಂಡವ ಅದರ ಕಾಸು ಕೊಡದೇ ಅನ್ಯಾಯ ಮಾಡಿದ್ದಾರೆ.
ಶಿರಸಿಯ ಅಬ್ದುಲ್ ರೆಹಮಾನ್ ಮಜೀಬ್ ಅವರು ಅಡಿಕೆ, ಕಾಳು ಮೆಣಸು ವ್ಯಾಪಾರ ಮಾಡಿಕೊಂಡಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕ ಹಾಗೇ ಅವರು ವಿಳ್ಯದೆಲೆ, ಏಲಕ್ಕಿಯನ್ನು ಪೂರೈಸುತ್ತಾರೆ. 2022ರಲ್ಲಿ ಬಿಹಾರದ ರಾಜು ಸುಲ್ತಾನಿಯಾ ಅವರು `ತಮಗೆ ಅಡಿಕೆ-ಕಾಳು ಮೆಣಸು ಬೇಕು’ ಎಂದು ಆರ್ಡರ್ ಮಾಡಿದ್ದರು. ಅದರ ಪ್ರಕಾರ ಅಬ್ದುಲ್ ಅವರು ಅದನ್ನು ಕಳುಹಿಸಿದ್ದರು.
2022ರ ಫೆಬ್ರವರಿಯಲ್ಲಿ ಪ್ರತಿ ಕ್ವಿಂಟಲ್ ಅಡಿಕೆಗೆ 30 ಸಾವಿರ ರೂ ದರದಲ್ಲಿ 13 ಕ್ವಿಂಟಲ್ ಅಡಿಕೆಯನ್ನು ಅಬ್ದುಲ್ ಅವರು ಬಿಹಾರಕ್ಕೆ ಕಳುಹಿಸಿದ್ದರು. ಅದಾದ ನಂತರ ಏಪ್ರಿಲ್ ತಿಂಗಳಿನಲ್ಲಿ 31500ರೂ ದರದಲ್ಲಿ 9 ಕ್ವಿಂಟಲ್ ರವಾನಿಸಿದ್ದರು. ಜೊತೆಗೆ 50 ಸಾವಿರ ರೂ ಮೌಲ್ಯದ 1.50 ಕೆಜಿ ಮೆಣಸನ್ನು ಕಳುಹಿಸಿದ್ದರು. ಜೂನ್ ಅವಧಿಯಲ್ಲಿ ಮತ್ತೆ 11 ಕ್ವಿಂಟಲ್ ಅಡಿಕೆಯನ್ನು ಎಂ ಎಲ್ ಪಿ ಎಲ್ ಟ್ರಾನ್ಸಪೋರ್ಟ ಮೂಲಕ ಕಳುಹಿಸಿದ್ದರು.
ಪ್ರತಿ ಬಾರಿ ಸರಕು ಕಳುಹಿಸಿದಾಗಲೂ ರಾಜು ಸುಲ್ತಾನಿಯಾ ಅವರು `ಮುಂದಿನ ಬಾರಿ ಹಣ ಕೊಡುವೆ’ ಎನ್ನುತ್ತಿದ್ದರು. ಆದರೆ, ಆ ಹಣ ಮಾತ್ರ ಬರುತ್ತಿರಲಿಲ್ಲ. ಹೀಗಾಗಿ ಜೋರಾಗಿ ಮಾತನಾಡಿದಾಗ ಒಮ್ಮೆ 5.75 ಲಕ್ಷ ರೂ ಪಾವತಿ ಮಾಡಿದ್ದು, ಉಳಿದ 10 ಲಕ್ಷ ರೂಪಾಯಿಯನ್ನು ಈವರೆಗೂ ಕೊಡಲಿಲ್ಲ.