BPL ಕಾರ್ಡದಾರರಿಗೆ ಸಾಲ ಕೊಡಲು ಹಿಂದೇಟು ಹಾಕುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಗರಂ ಆಗಿದ್ದಾರೆ. `ಬಡವರಿಗೆ ಸಹಾಯ ಮಾಡಿ’ ಎಂದು ಅವರು ತಾಕೀತು ಮಾಡಿದ್ದಾರೆ.
ಜಿ+2 ವಸತಿ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ನೀಡಲು ನಿರಾಕರಿಸಿದ ವಿಷಯವಾಗಿ ಅವರು ದಾಂಡೇಲಿಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ್ದು, ಬ್ಯಾಂಕಿನವರ ಕಾರ್ಯದ ಬಗ್ಗೆ ಅಸಮಧಾನವ್ಯಕ್ತಪಡಿಸಿದರು. `ನೀವು ಬೇರೆ ಊರಿನಿಂದ ವರ್ಗಾವಣೆಗೊಂಡು ಇಲ್ಲಿಗೆ ಬಂದಿರುತ್ತೀರಿ. ಪುನಃ ವರ್ಗಾವಣೆಗೊಂಡು ಇಲ್ಲಿಂದ ಹೋಗುತ್ತೀರಿ. ಆದರೆ, ಇಲ್ಲಿಯ ಜನ ಇಲ್ಲಿಯೇ ಇರುವವರು. ಅವರು ನಿಮ್ಮನ್ನು ಸ್ಮರಿಸುವಂತ ಕೆಲಸ ಮಾಡಬೇಕು’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
`ಆಶ್ರಯ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ನೀಡಬೇಕು ಎನ್ನುವ ಆದೇಶವೊದೆ. ಅದಾಗಿಯೂ ಬ್ಯಾಂಕಿನವರು ಸಾಲ ಕೊಡುತ್ತಿಲ್ಲ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಜನರಿಗೆ ಸಾಲ ಕೊಡಬಾರದು ಎನ್ನುವ ನಿಯಮ ಇದ್ದರೆ ತೋರಿಸಿ’ ಎಂದು ಸವಾಲು ಹಾಕಿದರು. ದೇಶಪಾಂಡೆ ಅವರ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. `ಕಾನೂನುಬಾಹಿರವಾಗಿ ಸಾಲ ನೀಡಿ ಎಂದು ನಾನು ಹೇಳುವುದಿಲ್ಲ. ಫಲಾನುಭವಿಗಳ ಸಾಲದ ಪತ್ರ ಗಮನಿಸಿ ನಿಯಮದ ಅಡಿಯಲ್ಲಿ ಸಾಲ ವಿತರಣೆಗೆ ಕ್ರಮ ಜರುಗಿಸಿ’ ಎಂದು ಸೂಚಿಸಿದರು.